ಹೈದರಾಬಾದ್, ಮೇ. 18 (DaijiworldNews/TA): ಐತಿಹಾಸಿಕ ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿರುವ ಕಟ್ಟಡದಲ್ಲಿ ಭಾನುವಾರ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ಎಂಟು ಜನರು ಸಾವನ್ನಪ್ಪಿದ್ದಾರೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲು 11 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ತಲುಪಿವೆ ಎಂದು ಅಧಿಕಾರಿ ತಿಳಿಸಿದ್ದಾರೆ . ವರದಿಯ ಪ್ರಕಾರ, ಭಾನುವಾರ ಮುಂಜಾನೆ ಸಂಭವಿಸಿದ ಬೆಂಕಿಯ ಕಾರಣ ಇನ್ನೂ ತಿಳಿದುಬಂದಿಲ್ಲ.

ಘಟನೆಯ ಬಗ್ಗೆ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಆಘಾತ ವ್ಯಕ್ತಪಡಿಸಿದ್ದು, ಕಟ್ಟಡದಲ್ಲಿ ಸಿಲುಕಿರುವವರನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಹಲವಾರು ಜನರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಸತ್ತವರಲ್ಲಿ ಕೆಲವು ಮಕ್ಕಳೂ ಸೇರಿದ್ದಾರೆ ಎಂದು ಹೇಳಲಾಗಿದೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಮತ್ತು ಸರಿಯಾದ ವೈದ್ಯಕೀಯ ಚಿಕಿತ್ಸೆ ನೀಡುವಂತೆ ನಿರ್ದೇಶನಗಳನ್ನು ನೀಡಲಾಗಿದೆ.