ಬೆಂಗಳೂರು, ಜೂ 21 (Daijiworld News/SM): ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಯಾವಾಗ ಬರುತ್ತದೆ ಎಂಬುವುದು ಗೊತ್ತಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದು, ಈ ಹಿಂದಿನ ಹೇಳಿಕೆಗೆ ದೇವೇಗೌಡರು ಯೂ ಟರ್ನ್ ಹೊಡೆದಿದ್ದಾರೆ.
ಈ ಹಿಂದೆ ರಾಜ್ಯದಲ್ಲಿ ಯಾವಾಗ ಬೇಕಾದರೂ ಮಧ್ಯಂತರ ಚುನಾವಣೆ ಬರಬಹುದೆಂದು ಎಂದು ದೊಡ್ಡಗೌಡರು ಹೇಳಿದ್ದರು. ಆದರೆ, ತಾನು ಮಾತನಾಡಿದ್ದು, ಸ್ಥಳೀಯ ಚುನಾವಣೆಯ ಬಗ್ಗೆ ಎಂಬುವುದಾಗಿ ತನ್ನ ಹೇಳಿಕೆಗೆ ದೇವೇಗೌಡರೇ ಉಲ್ಟಾ ಹೊಡೆದಿದ್ದಾರೆ. ನಾನು ವಿಧಾನಸಭೆ ಚುನಾವಣೆ ಕುರಿತು ಮಾತನಾಡಿಲ್ಲ. ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂಬುವುದಾಗಿ ಅವರು ತಿಳಿಸಿದ್ದಾರೆ.
ಸಾರ್ವತ್ರಿಕ ಚುನಾವಣೆ ಬಳಿಕ ಕಾಂಗ್ರೆಸ್ ಹೈಕಮಾಂಡ್ ಶಕ್ತಿ ಕಳೆದುಕೊಂಡಿದ್ದು, ಸರ್ಕಾರದ ಭವಿಷ್ಯ ತಿಳಿದಿಲ್ಲ. ಸರ್ಕಾರದ ಅಳಿವು ಉಳಿವು ಎಲ್ಲವೂ ಕಾಂಗ್ರೆಸ್ ಕೈಯಲ್ಲಿದೆ ಎಂದು ದೇವೇಗೌಡರು ಶುಕ್ರವಾರ ಬೆಳಿಗ್ಗೆ ಹೇಳಿಕೆ ನೀಡಿದ್ದರು. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವುದು ನಿಶ್ಚಿತ ಎಂಬುವುದಾಗಿಯೂ ಹೇಳಿದ್ದರು.
ಆದರೆ, ತಾನು ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಮಾತನಾಡಿದ್ದು. ನಗರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಕೆಲವು ಸ್ಥಾನಗಳಿಗೆ ಮಧ್ಯಂತರ ಚುನಾವಣೆಗಳು ಮುಂದಿನ ಅವಧಿಯಲ್ಲಿ ಬರಲಿವೆ. ಈ ಚುನಾವಣೆಯಲ್ಲಿ ಕಳೆದುಕೊಂಡ ಸ್ಥಾನಗಳ ಬಗ್ಗೆ ನಾನು ಮಾತನಾಡಿದ್ದು ಎಂಬುವುದಾಗಿ ದೇವೇಗೌಡ ಸ್ಪಷ್ಟಪಡಿಸಿದ್ದಾರೆ.