ಬೆಂಗಳೂರು, ಜೂ. 19 (DaijiworldNews/AK): ತುರ್ತು ಪರಿಸ್ಥಿತಿ ವಿರುದ್ಧ ಜನಜಾಗೃತಿ ಅಭಿಯಾನದ ಸಭೆಯನ್ನು ಇದೇ 24ರಂದು ಸಂಜೆ 4.30ಕ್ಕೆ ಬೆಂಗಳೂರಿನ ಟೌನ್ ಹಾಲ್ನಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಉದ್ಘಾಟಿಸುವರು ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ತಿಳಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಮತ್ತು ಮೀಸಾ ಬಂಧಿ ಯಡಿಯೂರಪ್ಪ ಅವರು ಅಧ್ಯಕ್ಷತೆ ವಹಿಸುವರು. ‘ಇಂಡಿಯನ್ ಎಕ್ಸ್ಪ್ರೆಸ್’ನ ಪ್ರಮುಖ ಅಂಕಣಕಾರರಾಗಿದ್ದ, ಹಾಗೂ ತುಘಲಕ್ ಪತ್ರಿಕೆಯ ಸಂಪಾದಕರಾಗಿ ತುರ್ತು ಪರಿಸ್ಥಿತಿ ವಿರುದ್ಧ ಜನಜಾಗೃತಿ ಮೂಡಿಸಿದ್ದ ತಮಿಳುನಾಡಿನ ಎಸ್.ಗುರುಮೂರ್ತಿ ಅವರು ಪ್ರಧಾನ ಭಾಷಣ ಮಾಡುವರು ಎಂದು ತಿಳಿಸಿದರು.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬಂಧಿಯಾಗಿದ್ದವರನ್ನು ಗುರುತಿಸಿ ಅಭಿನಂದಿಸಿ ಅವರ ಅನುಭವ ದಾಖಲಿಸಲಾಗುವುದು. ಯುವ ಪೀಳಿಗೆ ಮತ್ತು ಮೀಸಾ ಬಂಧಿಗಳ ಜೊತೆ ಸಂವಾದ ಏರ್ಪಡಿಸುವುದು, ತುರ್ತು ಪರಿಸ್ಥಿತಿ ವಿರುದ್ಧ ಜಾಗೃತ ನಡಿಗೆ ನಡೆಯಲಿದೆ. ಮೀಸಾ ಬಂಧಿಗಳು ತಾವು ಇದ್ದ ಜೈಲಿಗೆ ಭೇಟಿ ಕೊಡಲಿದ್ದಾರೆ. ಸಾಂವಿಧಾನಿಕ ಮೌಲ್ಯಗಳ ಜಾಗೃತಿ ಮೂಡಿಸಲಾಗುತ್ತದೆ ಎಂದು ತಿಳಿಸಿದರು.
ತುರ್ತು ಪರಿಸ್ಥಿತಿಯನ್ನು ಭವಿಷ್ಯದಲ್ಲಿ ಹೇರಬಾರದು; ಕಾಂಗ್ರೆಸ್ ಹೇಗೆ ಸರ್ವಾಧಿಕಾರಿ- ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂಬುದನ್ನು ತಿಳಿಸಿ ಜನಜಾಗೃತಿ ಮೂಡಿಸಲು ಜನಜಾಗೃತಿ ಅಭಿಯಾನ ನಡೆಸಲಾಗುತ್ತಿದೆ. ಬಿಜೆಪಿ ಮತ್ತು ಸಿಟಿಜನ್ ಫಾರ್ ಸೋಷಿಯಲ್ ಜಸ್ಟಿಸ್, ವಕೀಲರ ಸಂಘಟನೆ, ಸಾಮಾಜಿಕ ಗಣ್ಯರ ಸಂಘಟನೆ ಜೊತೆ ಇದನ್ನು ಆಯೋಜಿಸಲಾಗುತ್ತಿದೆ ಎಂದರು
22ರಿಂದ 30ರವರೆಗೆ ಜನಜಾಗೃತಿ ಅಭಿಯಾನ
ಜೂನ್ 22ರಿಂದ 30ರವರೆಗೆ ಜನಜಾಗೃತಿ ಅಭಿಯಾನವು ವಿವಿಧ ಜಿಲ್ಲೆಗಳಲ್ಲಿ ನಡೆಯಲಿದೆ ಎಂದು ಸಿ.ಟಿ.ರವಿ ಅವರು ಪ್ರಕಟಿಸಿದರು.