ಬಿಹಾರ, ಜೂ 22 (Daijiworld News/MSP): ಬಿಹಾರದಲ್ಲಿ ಮಿದುಳು ಜ್ವರಕ್ಕೆ ಬಲಿಯಾದವರ ಸಂಖ್ಯೆ 141ಕ್ಕೆ ಏರಿಕೆಯಾಗಿದೆ. ಎನ್ಸಿಫಾಲಿಟೀಸ್ ಸೋಂಕಿನಿಂದ ಮತ್ತೆ ಮೂವರು ಮಕ್ಕಳು ಶನಿವಾರ ಸಾವನ್ನಪ್ಪಿದ ವರದಿಯಾಗಿದೆ.
ಅಷ್ಟೇ ಅಲ್ಲ, ಮುಜಫ್ಪರನಗರ ಜಿಲ್ಲೆಯಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಮಿದುಳು ಜ್ವರವು ಈಗ ಬಿಹಾರದ 16 ಜಿಲ್ಲೆಗಳಿಗೆ ವ್ಯಾಪಿಸಿದ್ದು, ಪ್ರಸ್ತುತ 600 ಕ್ಕೂ ಹೆಚ್ಚು ಮಕ್ಕಳು ಈ ಜ್ವರದಿಂದ ಬಳಲುತ್ತಿರುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಇಂದು ಕೂಡಾ ಎನ್ಸಿಫಾಲಿಟೀಸ್ ಗೆ ಬಲಿಯಾದ ಮಕ್ಕಳು ಮುಜಫ್ಪರನಗರರ ಮೂಲದವರೆಂದು ಗುರುತಿಸಲಾಗಿದೆ.
ಮುಜಫ್ಪರ ನಗರ ಜಿಲ್ಲೆಯೊಂದರಲ್ಲೇ 437 ಪ್ರಕರಣಗಳು ಕಂಡುಬಂದಿವೆ ಎಂದು ಕೇಂದ್ರೀಯ ಆರೋಗ್ಯ ಇಲಾಖೆ ತಂಡದ ಅಧಿಕಾರಿ ಮನೋಜ್ ಜಲಾನಿ ಮಾಹಿತಿ ನೀಡಿದ್ದಾರೆ.
ಇನ್ನು ಬಿಹಾರದಲ್ಲಿ ಸಾವಿನ ಸರಣಿ ಮುಂದುವರೆದಿರುವಂತೆಯೇ ಅತ್ತ ದೆಹಲಿಯಲ್ಲಿ ರಾಜ್ಯಸಭೆ ಕಲಾಪದಲ್ಲೂ ಎನ್ಸಿಫಾಲಿಟೀಸ್ ಸಾವು ಪ್ರಕರಣ ಪ್ರತಿಧ್ವನಿಸಿದೆ. ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಲು ಪ್ರತಿಪಕ್ಷಗಳು ಆಗ್ರಹಿಸಿವೆ.