ಬೆಂಗಳೂರು, ಜೂ. 23 (DaijiworldNews/AK):ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮುಂದಿನ ದಿನಗಳಲ್ಲಿ ಶಾಸಕರು ಧ್ವನಿ ಎತ್ತಲಿದ್ದಾರೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜು ಕಾಗೆ ಅವರು ಕಾಂಗ್ರೆಸ್ ಸರಕಾರದ ವಿರುದ್ಧ ಧ್ವನಿ ಎತ್ತಿದ ಕುರಿತ ಪ್ರಶ್ನೆಗೆ ಉತ್ತರಿಸಿದರು. ಹಿರಿಯ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲರು ಮನೆ ಕೊಡುವ ಸಂದರ್ಭದಲ್ಲಿ ಲಂಚ ಕೊಡದೆ, ದುಡ್ಡು ಕೊಡದೆ ಏನೂ ಕೆಲಸ ಆಗುವುದಿಲ್ಲ ಎಂಬ ಗುರುತರ ಆರೋಪ ಮಾಡಿದ್ದಾರೆ. ಮುಖ್ಯಮಂತ್ರಿಗಳು ಕರೆದರೆ ಅವರ ಮುಂದೆಯೂ ವಾಸ್ತವಿಕ ಸ್ಥಿತಿಯನ್ನು ತಿಳಿಸುವುದಾಗಿ ಹೇಳಿದ್ದಾರೆ. ಮುಖ್ಯಮಂತ್ರಿಗಳೇ ಬಿ.ಆರ್.ಪಾಟೀಲರನ್ನು ಕರೆದು ಬಾಯಿ ಮುಚ್ಚಿಸುವ ಕೆಲಸ ಮಾಡಬಹುದೆಂಬ ಆತಂಕ ನಮಗಿದೆ ಎಂದು ತಿಳಿಸಿದರು.
ಇವರು, ಮೋಹನ್ದಾಸ್ ಪೈ ಅವರಂಥ ಹಿರಿಯರ ಬಗ್ಗೆ ಬೇರೆ ಬೇರೆ ಸುಳ್ಳು ಕಾರಣ ಹೇಳಿ ಎಫ್ಐಆರ್ ಹಾಕುವ ಧೈರ್ಯ ಮಾಡುತ್ತಿದ್ದಾರೆ. ರಾಜ್ಯದ ಹಿರಿಯ ಮುಖಂಡರು, ರಾಜಕೀಯದಿಂದ ದೂರ ಇರುವವರೂ ಈ ಸರಕಾರದ ವಿರುದ್ಧ ಮಾತನಾಡಬಾರದೆಂದು ಭಯ ಹುಟ್ಟಿಸುವ ಪ್ರಯತ್ನ ನಡೆದಿದೆ. ತುರ್ತು ಪರಿಸ್ಥಿತಿಯಲ್ಲಿ ಇದ್ದ ವಾತಾವರಣವನ್ನು ತರುವ ಪ್ರಯತ್ನ ಈ ಸರಕಾರ ಮಾಡುತ್ತಿದೆ; ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ. ಅದಕ್ಕೆ ಶಿವಕುಮಾರ್ ಅವರು ಹೆಜ್ಜೆಹೆಜ್ಜೆಗೆ ಬೆಂಬಲ ಕೊಡುತ್ತಿದ್ದಾರೆ ಎಂದು ಆರೋಪಿಸಿದರು. ಇದನ್ನು ಖಂಡಿಸುವುದಾಗಿ ಹೇಳಿದರು.
ಇದೆಲ್ಲ ಸಂಗತಿಗಳನ್ನು ರಾಜ್ಯದ ಉದ್ದಗಲಕ್ಕೆ ತೆರಳಿ ನಮ್ಮ ಕಾರ್ಯಕರ್ತರಿಗೆ ತಿಳಿಸುವೆ. ಮುಂದೆ ಯಾವ ರೀತಿಯ ಹೋರಾಟ ನಡೆಸಬೇಕೆಂಬ ಬಗ್ಗೆ ಯೋಚನೆಯನ್ನು ಮಾಡುತ್ತಿದ್ದೇವೆ ಎಂದರು.
ಕೇವಲ ರಾಜು ಕಾಗೆ ಮಾತ್ರವಲ್ಲ, ಹೀಗೆ ಹತ್ತಾರು ಜನರು ಈ ರೀತಿ ಹೇಳುತ್ತಿದ್ದಾರೆ. ಒಬ್ಬೊಬ್ಬರೇ ಬಾಯಿ ಬಿಡುತ್ತಾರೆ. ನೀವೇ ಕಾದು ನೋಡಿ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.