ನವದೆಹಲಿ, ಜೂ. 27 (DaijiworldNews/AA): ಬಿಜೆಪಿ ರಾಜ್ಯಾಧ್ಯಕ್ಷರ ನೇಮಿಸುವ ಬಗ್ಗೆ ದೆಹಲಿಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಬೇರೆ ರಾಜ್ಯಗಳ ಅಧ್ಯಕ್ಷರ ನೇಮಕದ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಕರ್ನಾಟಕದ ಬಗ್ಗೆ ಈವರೆಗೂ ಪ್ರಸ್ತಾಪ ಕೇಳಿ ಬಂದಿಲ್ಲ. ಈ ಬಗ್ಗೆ ಚರ್ಚಿಸಲು ನಾನು ದೆಹಲಿಗೆ ಬಂದಿಲ್ಲ, ನಾನು ಆ ರೇಸ್ನಲ್ಲಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.

ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿರುವ ಆರ್.ಅಶೋಕ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ರಾಜ್ಯಾಧ್ಯಕ್ಷ ಬದಲಾವಣೆ ಚರ್ಚೆ ಬೆನ್ನಲ್ಲೇ ಅಶೋಕ್ ಅವರು ಹೀಗೆ ಪಕ್ಷದ ವರಿಷ್ಠರನ್ನ ಭೇಟಿಯಾಗಿರುವುದು ಕುತೂಹಲ ಮೂಡಿಸಿತ್ತು.
ವರಿಷ್ಠರ ಭೇಟಿ ಬಳಿಕ ಈ ಬಗ್ಗೆ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯಾಧ್ಯಕ್ಷರ ಬಗ್ಗೆ ಚರ್ಚೆ ನಡೆದಿಲ್ಲ. ಆ ಬಗ್ಗೆ ಚರ್ಚಿಸಲು ನಾನು ಬಂದಿಲ್ಲ. ಪ್ರತಿ ಮೂರು ತಿಂಗಳಿಗೊಮ್ಮೆ ಬಂದು ರಾಜ್ಯದಲ್ಲಿ ನಡೆಯುವ ಬೆಳವಣಿಗೆ ಬಗ್ಗೆ ಮಾಹಿತಿ ನೀಡಲು ಸೂಚಿಸಿದ್ದರು. ಅದರಂತೆ ನಾನು ಮಾಹಿತಿ ನೀಡಲು ಬಂದಿದ್ದೇನೆ ಎಂದು ಹೇಳಿದರು.
ನಮ್ಮ ವರಿಷ್ಠರ ಜೊತೆಗೆ ಸುಧೀರ್ಘ ಮಾತುಕತೆ ನಡೆಸಿದ್ದೇನೆ. ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ಗೊಂದಲ, ಶಾಸಕರ ಹೇಳಿಕೆಗಳ ಬಗ್ಗೆ ಚರ್ಚಿಸಿದ್ದೇನೆ. ನಾವು ಹೋರಾಟ ಮಾಡುತ್ತಿದ್ದೇವೆ, ನಮ್ಮ ಹೋರಾಟದಿಂದ ಸಚಿವರೊಬ್ಬರು ರಾಜೀನಾಮೆ ನೀಡಿದರು. ಸಿಎಂ ಸಿದ್ದರಾಮಯ್ಯ ಸೈಟ್ ವಾಪಸ್ ನೀಡಿದರು. ಸರ್ಕಾರದ ವಿರುದ್ಧ ಹೋರಾಟ ಮಾಡಲು ನಮಗೆ ಮಾರ್ಗದರ್ಶನ ಮಾಡುತ್ತಾರೆ, ಹೋರಾಟದಲ್ಲಿ ಹಿಂದೆ ಉಳಿಯುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
ದೆಹಲಿಗೆ ಬಂದು ರಾಜ್ಯಾಧ್ಯಕ್ಷರ ಬಗ್ಗೆ ಚರ್ಚಿಸುವ ಅಗತ್ಯ ಇಲ್ಲ. ಬೆಂಗಳೂರಿಗೆ ಬಂದಾಗಲೇ ಅಮಿತ್ ಶಾ ಅವರ ಜೊತೆಗೆ ಸುದೀರ್ಘವಾಗಿ ಮಾತುಕತೆ ನಡೆಸಿದ್ದೇನೆ. ಕಾಂಗ್ರೆಸ್ ಸರ್ಕಾರ ನಿರ್ಗಮಿತ ಸರ್ಕಾರ, ಸರ್ಕಾರದ ವಿರುದ್ಧ ಅವರ ಶಾಸಕರೇ ಮಾತನಾಡುತ್ತಿದ್ದಾರೆ. ಶಾಸಕರು ರೆಬಲ್ ಆದರೆ, ಸರ್ಕಾರದ ಅವಧಿ ಮುಗಿತು ಎಂದರ್ಥ. ಮುಂದಿನ ಬಾರಿ ಈ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ ಎಂದರು.