ಮಂಡ್ಯ,ಜೂ. 28 (DaijiworldNews/AK): ಕಾವೇರಿ ಜಲಾನಯನ ಪ್ರದೇಶದಲ್ಲಿ ಭರ್ಜರಿ ಮಳೆಯಾಗುತ್ತಿದೆ. ಕಾವೇರಿ ನದಿ ತುಂಬಿ ಹರಿಯುತ್ತಿದ್ದು, ಕೆಆರ್ಎಸ್ ಡ್ಯಾಂ ಜೂನ್ ತಿಂಗಳಲ್ಲೇ ಭರ್ತಿಯಾಗಿದ್ದು, ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದೆ.

ಕೃಷ್ಣರಾಜ ಸಾಗರ ಜಲಾಶಯಕ್ಕೆ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿಯೊಬ್ಬರು ಜೂನ್ ತಿಂಗಳಲ್ಲಿಯೇ ಬಾಗಿನ ಅರ್ಪಿಸಲಿದ್ದಾರೆ. ಇದಕ್ಕೆ ಕಾರಣ ಅವಧಿಪೂರ್ವ ಮುಂಗಾರು ಮಳೆ ಹಾಗೂ ಕಾವೇರಿ ಜಲಾನಯನ ಪ್ರದೇಶದಲ್ಲಿ ಕಳೆದೊಂದು ತಿಂಗಳಿನಿಂದ ಭಾರಿ ಮಳೆಯಾಗುತ್ತಿರುವುದು.
ಜೂನ್ 30ರಂದು, ಅಂದರೆ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಆರ್ಎಸ್ ಡ್ಯಾಂಗೆ ಬಾಗಿನ ಅರ್ಪಿಸಲಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳ ಕಚೇರಿ ಮಾಹಿತಿ ನೀಡಿವೆ. ಕೆಆರ್ಎಸ್ ಡ್ಯಾಂ ಸಾಮಾನ್ಯವಾಗಿ ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗುತ್ತದೆ. ಆ ನಂತರ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸುತ್ತಾರೆ. ಆದರೆ, ಈ ವರ್ಷ ಜೂನ್ ಕೊನೆಯ ವಾರದಲ್ಲೇ ಡ್ಯಾಂ ಭರ್ತಿಯಾಗಿದ್ದು, ಸಿದ್ದರಾಮಯ್ಯನವರಿಗೆ ಹೊಸ ಅವಕಾಶ ದೊರೆತಿದೆ.
ಶನಿವಾರ ಬೆಳಗ್ಗಿನ ವೇಳೆ ಕೆಆರ್ಎಸ್ ಡ್ಯಾಂ 123.25 ಅಡಿ ಭರ್ತಿಯಾಗಿದೆ. 124.80 ಅಡಿ ಗರಿಷ್ಠ ಸಾಮರ್ಥ್ಯವಿರುವ ಕೆಆರ್ಎಸ್ ಜಲಾಶಯ ಪೂರ್ಣ ಭರ್ತಿಯಾಗಲು ಇನ್ನು ಒಂದು ಅಡಿ ಅಷ್ಟೇ ಬಾಕಿ ಇದೆ. ಅದು ಇಂದೇ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಲಿದೆ. ಇದರೊಂದಿಗೆ, 93 ವರ್ಷಗಳ ಬಳಿಕ ಇದೇ ಮೊದಲ ಬಾರಿ ಜೂನ್ ತಿಂಗಳಲ್ಲೇ ಕೆಆರ್ಎಸ್ ಡ್ಯಾಂ ಭರ್ತಿಯಾದಂತಾಗಲಿದೆ.
1979 ರಿಂದ ಕೆಆರ್ಎಸ್ ಡ್ಯಾಂನಲ್ಲಿ ಕಾವೇರಿಗೆ ಬಾಗಿನ ಅರ್ಪಿಸುವ ಪದ್ದತಿ ಆರಂಭವಾಗಿತ್ತು. ಅಂದಿನ ಮುಖ್ಯಮಂತ್ರಿ ಡಿ. ದೇವರಾಜ ಅರಸ್ ಅವರು ಬಾಗಿನ ಅರ್ಪಿಸುವ ಮೂಲಕ ಪದ್ದತಿಗೆ ನಾಂದಿ ಹಾಡಿದ್ದರು.