ನವದೆಹಲಿ, ಜೂ. 28 (DaijiworldNews/AK):ಹಿರಿಯ ಐಪಿಎಸ್ ಅಧಿಕಾರಿ ಪರಾಗ್ ಜೈನ್ ಅವರನ್ನು ಭಾರತದ ಬಾಹ್ಯ ಗುಪ್ತಚರ ಸಂಸ್ಥೆಯಾದ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ ಮುಂದಿನ ಕಾರ್ಯದರ್ಶಿಯಾಗಿ ಕೇಂದ್ರ ಸರ್ಕಾರ ನೇಮಿಸಿದೆ.

1989ರ ಬ್ಯಾಚ್ನ ಪಂಜಾಬ್ ಕೇಡರ್ನ ಐಪಿಎಸ್ ಅಧಿಕಾರಿ ಜೈನ್, ಜುಲೈ 1 ರಂದು 2 ವರ್ಷಗಳ ಸ್ಥಿರ ಅವಧಿಗೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಹಾಲಿ ಮುಖ್ಯಸ್ಥ ರವಿ ಸಿನ್ಹಾ ಅವರ ಅಧಿಕಾರ ಇದೇ ಜೂನ್ 30 ರಂದು ಕೊನೆಗೊಳ್ಳಲಿದೆ.
ಪಾಕಿಸ್ತಾನಿ ಸಶಸ್ತ್ರ ಪಡೆಗಳ ಕುರಿತು ನಿರ್ಣಾಯಕ ಗುಪ್ತಚರ ಮಾಹಿತಿಯನ್ನು ಸಂಗ್ರಹಿಸುವ ಮೂಲಕ ‘ಆಪರೇಷನ್ ಸಿಂಧೂರ್’ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಾಯುಯಾನ ಸಂಶೋಧನಾ ಕೇಂದ್ರದ (ಎಆರ್ಸಿ) ಮುಖ್ಯಸ್ಥರಾಗಿ ಪರಾಗ್ ಜೈನ್ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ. ಪಾಕಿಸ್ತಾನ-ಭಾರತದ ನಡುವಿನ ಸಂಘರ್ಷದ ವೇಳೆ ಪ್ರಮುಖ ಕಾರ್ಯತಂತ್ರಗಳಿಗೆ ಅವರು ಕೊಡುಗೆ ನೀಡಿದ್ದಾರೆ.
ಪರಾಗ್ ಜೈನ್ ಈ ಹಿಂದೆ ಚಂಡೀಗಢದ ಎಸ್ಎಸ್ಪಿಯಾಗಿ ಸೇವೆ ಸಲ್ಲಿಸಿದ್ದಾರೆ. ಕೆನಡಾ ಮತ್ತು ಶ್ರೀಲಂಕಾದಲ್ಲಿ ರಾಜತಾಂತ್ರಿಕ ಪಾತ್ರಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅವರು ಭಯೋತ್ಪಾದನಾ ನಿಗ್ರಹ ನಿಯೋಜನೆಗಳನ್ನು ಸಹ ನಿರ್ವಹಿಸಿದ್ದಾರೆ.