ಬೆಂಗಳೂರು, ಜೂ. 28 (DaijiworldNews/AK):ದೇಶದಲ್ಲಿ ಕಾಂಗ್ರೆಸ್ ಪಕ್ಷವು ಒಬಿಸಿ ಸಮುದಾಯಕ್ಕೆ ನಿರಂತರವಾಗಿ ಮೋಸ ಮಾಡುತ್ತ ಬಂದಿದೆ ಎಂದು ಕೇಂದ್ರ ಪರಿಸರ ವಿಜ್ಞಾನ, ಅರಣ್ಯ, ಹವಾಮಾನ ವೈಪರೀತ್ಯ ಖಾತೆ ಸಚಿವ ಭೂಪೇಂದ್ರ ಯಾದವ್ ಅವರು ಆಕ್ಷೇಪಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯದ ಬಳಿಕ ಒಬಿಸಿ ಸಮುದಾಯಕ್ಕೆ ಮೀಸಲಾತಿ ಲಭಿಸಬೇಕಿತ್ತು. ಆದರೆ, ಕಾಂಗ್ರೆಸ್ ಪಕ್ಷವು ಕಾಕಾ ಕಾಲೇಕರ್ ಆಯೋಗದ ವರದಿಯನ್ನು ಮೂಲೆಗೊತ್ತಿತಲ್ಲದೆ, ಅದನ್ನು ಅನುಷ್ಠಾನಕ್ಕೆ ತರಲಿಲ್ಲ ಎಂದು ಆಕ್ಷೇಪಿಸಿದರು.
ದೇಶವು ತುರ್ತು ಪರಿಸ್ಥಿತಿಯಿಂದ ಸ್ವತಂತ್ರವಾದ ಬಳಿಕ, ಕಾಂಗ್ರೆಸ್ಸೇತರ, ಜನತಾ ಪಕ್ಷವು ಕೇಂದ್ರದಲ್ಲಿ ಅಧಿಕಾರ ಪಡೆಯಿತು. ಅಲ್ಲದೇ, ಮಂಡಲ್ ಆಯೋಗ ರಚಿಸಿತು. ಜನತಾ ಪಕ್ಷ ಅಧಿಕಾರಕ್ಕೆ ಬಾರದೆ ಇದ್ದರೆ ಮಂಡಲ್ ಆಯೋಗದ ರಚನೆ ಆಗುತ್ತಿರಲಿಲ್ಲ ಎಂದು ತಿಳಿಸಿದರು. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರ ಕಳಕೊಂಡ ಬಳಿಕ ಬಿಜೆಪಿ ಬೆಂಬಲಿತ ವಿ.ಪಿ.ಸಿಂಗ್ ಅವರ ಸರಕಾರವು ಮಂಡಲ್ ಆಯೋಗದ ವರದಿ ಜಾರಿಯಾಗಿ ಒಬಿಸಿಗೆ ಮೀಸಲಾತಿಯ ಪ್ರಯೋಜನ ಲಭಿಸಿತು ಎಂದು ತಿಳಿಸಿದರು.
ವಿ.ಪಿ.ಸಿಂಗ್ ಅವರ ಸರಕಾರವು ಅಧಿಕಾರ ಗಳಿಸದೆ ಇದ್ದರೆ ಮಂಡಲ್ ವರದಿಯೂ ಅನುಷ್ಠಾನಕ್ಕೆ ಬರುತ್ತಿರಲಿಲ್ಲ ಎಂದು ನುಡಿದರು. ಬಿಜೆಪಿಯು ಸ್ವಾತಂತ್ರ್ಯದ ಬಳಿಕ ಮೊದಲ ಬಾರಿಗೆ ಜಾತಿ ಗಣತಿ ಮಾಡಿಸಲು ಮುಂದಾಗಿದೆ. ನಮ್ಮ ಸಬ್ಕಾ ಸಾಥ್, ಸಬ್ ಕಾ ವಿಕಾಸ್ ನೀತಿಯಿಂದ ಸಮಾಜದ ಎಲ್ಲ ವರ್ಗಗಳ ವೈಜ್ಞಾನಿಕ ಅಂಕಿಅಂಶದ ಆಧಾರದಲ್ಲಿ ಅವರ ಜೀವನದಲ್ಲಿ ಪರಿವರ್ತನೆ ತರಲಿದ್ದೇವೆ ಎಂದರು. ಕಳೆದ 11 ವರ್ಷಗಳಲ್ಲಿ ಮೋದಿಜೀ ಅವರ ನೇತೃತ್ವದಲ್ಲಿ ಸಮಾಜದ ಪ್ರತಿ ವರ್ಗದ ವಿಕಾಸಕ್ಕಾಗಿ ಅಭಿವೃದ್ಧಿ ಕಾರ್ಯಗಳು, ಬಡವರ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದು ವಿಶ್ಲೇಷಿಸಿದರು.
ಕಾಂತರಾಜು ವರದಿ ಅನುಷ್ಠಾನ ಇಲ್ಲ; ಮುಸ್ಲಿಮರ ತುಷ್ಟೀಕರಣ
ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಒಬಿಸಿಗೆ ಮೋಸ ಮಾಡುವ ಕೆಲಸ ಆಗುತ್ತಿದೆ ಎಂಬುದನ್ನು ಜನರೂ ಅರಿತಿದ್ದಾರೆ. ಕಾಂತರಾಜು ಆಯೋಗದ ವರದಿ ಅನುಷ್ಠಾನಕ್ಕೆ ತಂದಿಲ್ಲ ಎಂದು ಭೂಪೇಂದ್ರ ಯಾದವ್ ಅವರು ಆಕ್ಷೇಪ ವ್ಯಕ್ತಪಡಿಸಿದರು.
ಒಬಿಸಿ ಸಮುದಾಯದ ಜಾಗದಲ್ಲಿ ಮುಸ್ಲಿಮರ ತುಷ್ಟೀಕರಣಕ್ಕಾಗಿ ಮೀಸಲಾತಿ ಜಾರಿ ಮಾಡಿರುವುದು, 165 ಕೋಟಿ ವೆಚ್ಚದ ವರದಿಯನ್ನು ಮೂಲೆಗೆ ಎಸೆದಿರುವುದು, ನಮ್ಮ ಸರಕಾರದಲ್ಲಿ ಜಾರಿಗೊಳಿಸಿದ ನೀತಿಗಳನ್ನು ರದ್ದು ಮಾಡುವ ಕೆಲಸ ಕಾಂಗ್ರೆಸ್ ಸರಕಾರದಿಂದ ಆಗಿದೆ ಎಂದು ಟೀಕಿಸಿದರು.