ನವದೆಹಲಿ, ಜೂ. 30 (DaijiworldNews/AK): ಇನ್ನು ಮುಂದೆ ರೈಲು ಹೊರಡುವ 8 ಗಂಟೆಯ ಮೊದಲು ರಿಸರ್ವೇಷನ್ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಭಾರತೀಯ ರೈಲ್ವೇ ತಿಳಿಸಿದೆ.ಪ್ರಸ್ತುತ 4 ಗಂಟೆಯ ಮೊದಲು ರಿಸರ್ವೇಷನ್ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತಿತ್ತು. ಆದರೆ ಜುಲೈ 1 ರಿಂದ ರೈಲು ಹೊರಡುವ 8 ಗಂಟೆಯ ಮೊದಲು ರಿಸರ್ವೇಷನ್ ಚಾರ್ಟ್ ಬಿಡುಗಡೆಯಾಗಲಿದೆ.

ಈ ಬದಲಾವಣೆಯಿಂದ ಪ್ರಯಾಣಿಕರಿಗೆ ಹೆಚ್ಚಿನ ಸ್ಪಷ್ಟತೆ ಸಿಗಲಿದೆ. ಒಂದು ವೇಳೆ ವೇಟಿಂಗ್ ಲಿಸ್ಟ್ನಲ್ಲಿದ್ದ ಪ್ರಯಾಣಿಕರಿಗೆ ಟಿಕೆಟ್ ಸಿಗದೇ ಇದ್ದರೆ ಪರ್ಯಾಯ ಪ್ರಯಾಣ ವ್ಯವಸ್ಥೆಗಳನ್ನು ಮಾಡಲು ಸಮಯ ಸಿಗಲಿದೆ.
ಜುಲೈ 1 ರಿಂದ 2025 ರಿಂದ ಐಆರ್ಸಿಟಿಸಿ ವೆಬ್ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ಪರಿಶೀಲಿಸಿದ ಬಳಕೆದಾರರಿಗೆ ಮಾತ್ರ ತತ್ಕಾಲ್ ಟಿಕೆಟ್ಗಳನ್ನು ಬುಕ್ ಮಾಡಲು ಅನುಮತಿ ನೀಡಲಾಗುವುದು ಎಂದು ಭಾರತೀಯ ರೈಲ್ವೆ ಹೇಳಿದೆ.
ತಾತ್ಕಾಲ್ ಬುಕ್ಕಿಂಗ್ಗಳಿಗಾಗಿ ಒಟಿಪಿ ಆಧಾರಿತ ದೃಢೀಕರಣದ ಅನುಷ್ಠಾನವು ಜುಲೈ ಕೊನೆಯಿಂದ ಆರಂಭವಾಗಲಿದೆ. ಬಳಕೆದಾರರು ಆಧಾರ್ ಅಥವಾ ತಮ್ಮ ಡಿಜಿಲಾಕರ್ ಖಾತೆಗಳಲ್ಲಿ ಸಂಗ್ರಹವಾಗಿರುವ ಇತರ ಮಾನ್ಯ ಸರ್ಕಾರಿ ಗುರುತಿನ ದಾಖಲೆಗಳನ್ನು ಬಳಸಿಕೊಂಡು ತಮ್ಮ ಗುರುತನ್ನು ಪರಿಶೀಲಿಸಬೇಕಾಗುತ್ತದೆ. ಈ ಹಿಂದೆ ಆಧಾರ್-ಪ್ರಮಾಣೀಕೃತ ಬಳಕೆದಾರರು ಮಾತ್ರ ಜುಲೈ 1 ರಿಂದ ತತ್ಕಾಲ್ ಟಿಕೆಟ್ಗಳನ್ನು ಬುಕ್ ಮಾಡಬಹುದು ಎಂದು ಪ್ರಕಟಿಸಿತ್ತು.
ಸೆಪ್ಟೆಂಬರ್ ವೇಳೆ ಪ್ರಯಾಣಿಕರ ಹೊಸ ರಿಸರ್ವೇಷನ್ ವ್ಯವಸ್ಥೆ ಜಾರಿಗೆ ಬರಲಿದೆ. ಸದ್ಯ ಪ್ರತಿ ನಿಮಿಷಕ್ಕೆ 32 ಸಾವಿರ ಟಿಕೆಟ್ ಬುಕ್ಕಿಂಗ್ ಮಾಡಬಹುದು. ಆದರೆ ವೆಬ್ಸೈಟ್ ನವೀಕರಣಗೊಳಿಸಿದ ಬಳಿಕ ಪ್ರತಿ ನಿಮಿಷಕ್ಕೆ 1.50 ಲಕ್ಷ ಟಿಕೆಟ್ ಬುಕ್ ಮಾಡುವಂತೆ ಅಪ್ಗ್ರೇಡ್ ಮಾಡಲಾಗುತ್ತದೆ.