ಕೇರಳ, ಜು. 02 (DaijiworldNews/AA): ಯುಪಿಎಸ್ಸಿ ಪರೀಕ್ಷೆಯು ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಈ ಪರೀಕ್ಷೆಯನ್ನು ಬರೆಯಲು ಕಠಿಣ ಪರಿಶ್ರಮ, ದೃಢ ಸಂಕಲ್ಪ ಅಗತ್ಯ. ಹೀಗೆ ಕಠಿಣ ಪರಿಶ್ರಮ, ದೃಢ ಸಂಕಲ್ಪದಿಂದ, ಅಡೆತಡೆಗಳನ್ನು ಮೆಟ್ಟಿ ನಿಂತು ಯುಪಿಎಸ್ಸಿ ಪರೀಕ್ಷೆ ಬರೆದು ಐಡಡಸ್ ಅಧಿಕಾರಿಯಾಗುವಲ್ಲಿ ಯಶಸ್ವಿಯಾದ ಅಭಿನ್ ಗೋಪಿ ಅವರ ಯಶೋಗಾಥೆ ಇದು.

ಅಭಿನ್ ಗೋಪಿ ಅವರು ಮೂಲತಃ ಕೇರಳದವರು. ಅಭಿನ್ ಅವರ ತಂದೆ ತೆಂಗಿನ ಮರಗಳನ್ನು ಹತ್ತಿ ಜೀವನ ಸಾಗಿಸುತ್ತಿದ್ದರು. ಆದರೆ ಅಭಿನ್ 17 ವರ್ಷದವರಾಗಿದ್ದಾಗ ಅವರ ತಂದೆ ನಿಧನರಾದರು.
ಬಳಿಕ ಅವರ ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿ ಅಭಿನ್ ಹೆಗಲಿಗೆ ಬಿತ್ತು. ಕುಟುಂಬಕ್ಕೆ ಸಹಾಯ ಮಾಡಲು ಅಭಿನ್ ಹಲವಾರು ಕೆಲಸಗಳನ್ನು ಮಾಡುತ್ತಾರೆ. ಅಭಿನ್ ಜೀವನ ನಿರ್ವಹಣೆಗಾಗಿ ಪೈಂಟರ್, ಡೆಲಿವರಿ ಬಾಯ್, ಮತ್ತು ಹೋಟೆಲ್ನಲ್ಲಿಯೂ ಕೆಲಸ ಮಾಡಿದರು. ಇದರೊಂದಿಗೆ ತಮ್ಮ ಶಿಕ್ಷಣವನ್ನು ಮುಂದುವರೆಸಿದರು.
2019 ರಲ್ಲಿ, ಅಭಿನ್ ತಮ್ಮ ಅನೇಕ ಕೆಲಸಗಳನ್ನು ಬಿಟ್ಟು ಕೇವಲ ತಮ್ಮ ಅಧ್ಯಯನದ ಮೇಲೆ ಗಮನವಹಿಸಿದರು. ಯುಪಿಎಸ್ಸಿ ಪರೀಕ್ಷೆ ಬರೆಯಲು ತಯಾರಿ ಪ್ರಾರಂಭಿಸಿದರು. ಅದಕ್ಕಾಗಿ ದಿನಕ್ಕೆ ಸುಮಾರು 15 ಗಂಟೆಗಳ ಕಾಲ ಅಧ್ಯಯನ ನಡೆಸುತ್ತಿದ್ದರು.
ಅಭಿನ್ ಅವರ ಕಠಿಣ ಪರಿಶ್ರಮ ಮತ್ತು ದೃಢತೆಗೆ 2021 ರಲ್ಲಿ ಫಲ ಸಿಕ್ಕಿತು. 2021ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದ ಅವರು ಉತ್ತೀರ್ಣರಾದರು. ಉತ್ತಮ ರ್ಯಾಂಕ್ ಪಡೆದು ಐಎಎಸ್ ಅಧಿಕಾರಿಯಾದ ಅವರು, ಕಂದಾಯ ಇಲಾಖೆಯಲ್ಲಿ ಉಪ ಜಿಲ್ಲಾಧಿಕಾರಿಯಾಗಿ ಆಯ್ಕೆಯಾದರು. ಈ ಮೂಲಕ ಅಭಿನ್ ಅನೇಕ ಯುಪಿಎಸ್ಸಿ ಅಭ್ಯರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ.