ನವದೆಹಲಿ, ಜು. 02 (DaijiworldNews/AA): ರಾಜ್ಯ ಸರ್ಕಾರ ಬೈಕ್ ಟ್ಯಾಕ್ಸಿ ಸೇವೆ ನಿಷೇಧ ಹೇರಿದ ಹಿನ್ನೆಲೆ ಭಾರೀ ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರವು ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಿದೆ. ಜೊತೆಗೆ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿದೆ.

ಕಳೆದ ಜೂ.16ರಿಂದ ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಯನ್ನು ಬ್ಯಾನ್ಗೊಳಿಸಿತ್ತು. ಈ ಹಿನ್ನೆಲೆ ಇದರ ವಿರುದ್ಧ ಭಾರಿ ಪ್ರತಿಭಟನೆ ನಡೆಯುತ್ತಿದೆ. ಈ ನಡುವೆ ಕೇಂದ್ರ ಸರ್ಕಾರ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಿದೆ. ಆದರೆ ಕೇಂದ್ರ ಅನುಮೋದನೆ ನೀಡಿದ್ದರೂ ಕೂಡ ಅದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕು ರಾಜ್ಯ ಸರ್ಕಾರಕ್ಕಿರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.
ಬೈಕ್ ಟ್ಯಾಕ್ಸಿ ಕುರಿತು ಕೇಂದ್ರ ಸರ್ಕಾರದ ನಿರ್ಧಾರದಿಂದ ರಸ್ತೆ ದಟ್ಟಣೆ ಮತ್ತು ವಾಹನ ಮಾಲಿನ್ಯದಿಂದ ತೊಂದರೆಗೀಡಾದ ಜನರಿಗೆ ಹಾಗೂ ದೀರ್ಘಕಾಲದವರೆಗೆ ಕಾನೂನು ಅನಿಶ್ಚಿತತೆಯ ನಡುವೆ ಕಾರ್ಯನಿರ್ವಹಿಸುತ್ತಿದ್ದ ರ್ಯಾಪಿಡೊ ಮತ್ತು ಊಬರ್ನಂತಹ ಬೈಕ್ ಟ್ಯಾಕ್ಸಿ ನಿರ್ವಾಹಕರು ನಿಟ್ಟುಸಿರು ಬಿಡುವಂತಾಗಿದೆ.
ಈ ಸಂಬಂಧ ಕೇಂದ್ರ ಸರ್ಕಾರ ಮಾರ್ಗಸೂಚಿಯನ್ನು ಹೊರಡಿಸಿದ್ದು, ನಿಮ್ಮ ಖಾಸಗಿ ಬೈಕ್ಗಳನ್ನು ಬಳಸಿಕೊಂಡು ಅಗ್ರಿಗೇಟರ್ ಸೇವೆಗಳನ್ನು ಒದಗಿಸಬಹುದು. ಆದರೆ ಆಯಾ ರಾಜ್ಯ ಸರ್ಕಾರದ ಅನುಮತಿ ಕಡ್ಡಾಯ ಎಂದು ತಿಳಿಸಿದೆ. ಆದರೆ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ 1988ರ ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ 2025ರ ಅಗ್ರಿಗೇಟರ್ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಮಾರ್ಗಸೂಚಿಯಲ್ಲಿ ಏನಿದೆ?
* ರಾಜ್ಯ ಸರ್ಕಾರಗಳು ಖಾಸಗಿ ಬೈಕ್ಗಳನ್ನು ಪ್ರಯಾಣಿಕರ ಸಂಚಾರಕ್ಕೆ ಬಳಸಲು ಅಗ್ರಿಗೇಟರ್ಗಳಿಗೆ ಅನುಮತಿ ಕೊಡಬಹುದು.
* ಇದರಿಂದ ಸಂಚಾರ ದಟ್ಟಣೆ, ಮಾಲಿನ್ಯ ನಿಯಂತ್ರಣ, ಕೈಗೆಟುಕುವ ದರದ ಪ್ರಯಾಣ, ಸ್ಥಳೀಯ ಸಾರಿಗೆ ಅಭಿವೃದ್ಧಿ ಮತ್ತು ಜೀವನವನ್ನ ರೂಪಿಸಲು ಅವಕಾಶ ಮಾಡಿಕೊಡಬಹುದು.
* ರಾಜ್ಯ ಸರ್ಕಾರಗಳು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 67ರ ಸಬ್ ಸೆಕ್ಷನ್ (3)ರ ಅಡಿಯಲ್ಲಿ ಅಗ್ರಿಗೇಟರ್ಗಳಿಗೆ ಖಾಸಗಿ ವಾಹನಗಳನ್ನ ಪ್ರಯಾಣಿಕರ ಸಂಚಾರಕ್ಕೆ ಬಳಸಲು ಅನುಮತಿ ಕೊಡಬಹುದು
* ಇದರಡಿ ಅಗ್ರಿಗೇಟರ್ಗಳಿಗೆ ದೈನಂದಿನ, ವಾರದ, ಹದಿನೈದು ದಿನದ ಅನುಮತಿಗಾಗಿ ಸರ್ಕಾರ ಶುಲ್ಕ ವಿಧಿಸಬಹುದು.