ನವದೆಹಲಿ, ಜು. 02 (DaijiworldNews/AA): ಬೆಂಗಳೂರು, ಮುಂಬೈನಂತಹ ಮಹಾ ನಗರಗಳಲ್ಲಿನ ಜನರು ಆಟೋ, ಓಲಾ. ಊಬರ್ನಲ್ಲಿ ಓಡಾಡುವುದು ಸಾಮಾನ್ಯ. ಆದ್ರೆ ಕೆಲವೊಮ್ಮೆ ಚಾಲಕರು ನಿಗದಿಕ್ಕಿಂತ ಹೆಚ್ಚು ದುಡ್ಡು ಕೇಳುತ್ತಾರೆ. ಇದರ ವಿರುದ್ಧ ಗ್ರಾಹಕರು ಆಕ್ರೋಶ ಹೊರಹಾಕುತ್ತಲೇ ಬಂದಿದ್ದಾರೆ. ಆದರೀಗ ಕೇಂದ್ರ ಸರ್ಕಾರವೇ ಪೀಕ್ ಅವರ್ಗಳಲ್ಲಿ ದುಪ್ಪಟ್ಟು ದರ ವಿಧಿಸಲು ಒಪ್ಪಿಗೆ ನೀಡಿದೆ.

ಓಲಾ, ಊಬರ್ ನಂತರ ಅಗ್ರಿಗೇಟರ್ ಕಂಪನಿಗಳು ಪೀಕ್ ಅವರಗಳಲ್ಲಿ ಮೂಲ ಬೆಲೆಗಿಂತ ದುಪ್ಪಟ್ಟು ದರ ಅಂದರೆ ಸರ್ಜ್ ಚಾರ್ಜ್ ವಿಧಿಸಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಸಂಬಂಧ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಜುಲೈ 1ರಂದು ಆದೇಶ ಹೊರಡಿಸಿದೆ. ಮೋಟಾರ್ ವೆಹಿಕಲ್ ಅಗ್ರಿಗೇಟರ್ ಮಾರ್ಗಸೂಚಿಗಳು 2025ರ ಅನ್ವಯ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ.
ಈವರೆಗೆ ಕ್ಯಾಬ್ ಅಗ್ರಿಗೇಟರ್ಗಳು ಪೀಕ್ ಅವರ್ಗಳಲ್ಲಿ ಸರ್ಜ್ ಬೆಲೆ ಮೂಲ ದರಕ್ಕಿಂತ 1.5 ಪಟ್ಟು ಹೆಚ್ಚು ವಿಧಿಸಲಾಗುತ್ತಿತ್ತು. ಆದರೀಗ ಹೊಸ ಮಾರ್ಗಸೂಚಿಯ ಪ್ರಕಾರ 2 ಪಟ್ಟು ಹೆಚ್ಚಿನ ದರ ವಿಧಿಸಬಹುದಾಗಿದೆ. ಅಲ್ಲದೇ ಮುಂದಿನ ಮೂರು ತಿಂಗಳ ಒಳಗೆ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲು ರಾಜ್ಯಗಳಿಗೆ ಸೂಚನೆ ನೀಡಲಾಗಿದೆ.
ಇನ್ನು ನಿರ್ದಿಷ್ಟ ಕಾರಣವಿಲ್ಲದೇ ಸವಾರಿಯನ್ನ ರದ್ದುಗೊಳಿಸಿದ್ರೆ 100 ರೂ.ಗೆ 10% ನಂತೆ ದಂಡ ವಿಧಿಸಲು ಅವಕಾಶ ನೀಡಲಾಗಿದೆ. ಜೊತೆಗೆ ೩ ಕಿಮೀ ಒಳಪಟ್ಟ ಡೆಡ್ ಮೈಲೆಜ್ಗೆ ಪ್ರಯಾಣಿಕಗೆ ಯಾವುದೇ ಶುಲ್ಕ ವಿಧಿಸಬಾರದು. ಅಗ್ರಿಗೇಟರ್ ಪ್ರಯಾಣಿಕರಿಗೆ ಕನಿಷ್ಠ 5 ಲಕ್ಷ ರೂ. ವಿಮೆ ಖಚಿತಪಡಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ.
ಕೇಂದ್ರ ಸಾರಿಗೆ ಸಚಿವಾಲಯ ಹೊರಡಿಸಿದ ಮಾರ್ಗಸೂಚಿ:
*ಖಾಸಗಿ ಮೋಟಾರುಸೈಕಲ್ಗಳನ್ನು ಬೈಕ್ ಟ್ಯಾಕ್ಸಿಗೆ ಬಳಸಬಹುದು. ಇದಕ್ಕೆ ಅನುಮತಿ ನೀಡುವುದು ಬಿಡುವುದು ರಾಜ್ಯ ಸರ್ಕಾರಗಳಿಗೆ ಬಿಟ್ಟಿದ್ದು
*ಖಾಸಗಿ ದ್ವಿಚಕ್ರ ವಾಹನಗಳನ್ನು ವಾಣಿಜ್ಯ ಸೇವೆಗೆ ಬಳಸುವ ಅಗ್ರಿಗೇಟರ್ಗಳಿಗೆ ರಾಜ್ಯ ಸರ್ಕಾರಗಳು ಶುಲ್ಕ ವಿಧಿಸಬಹುದು.
*ಎಲ್ಲಾ ಚಾಲಕರ ಪೊಲೀಸ್ ವೆರಿಫಿಕೇಶನ್ ಆಗಿರಬೇಕು. ಕಣ್ಣಿನ ಪರೀಕ್ಷೆಯೂ ಸೇರಿ ಎಲ್ಲಾ ದೈಹಿಕ ಆರೋಗ್ಯ ತಪಾಸಣೆ ಮತ್ತು ಮಾನಸಿಕ ಆರೋಗ್ಯ ತಪಾಸಣೆ ಆಗಿರಬೇಕು. ಆಧಾರ್ ದಾಖಲೆಯ ದೃಢೀಕರಣ ಪಡೆಯಬೇಕು
*ಪ್ರತಿಯೊಬ್ಬ ಚಾಲಕನಿಗೂ 10 ಲಕ್ಷ ರೂ ಟರ್ಮ್ ಇನ್ಷೂರೆನ್ಸ್, ಮತ್ತು 5 ಲಕ್ಷ ರೂ ಹೆಲ್ತ್ ಇನ್ಷೂರೆನ್ಸ್ ಕವರೇಜ್ ಮಾಡಿಸಿರಬೇಕು.
*ಚಾಲಕರನ್ನು ನೊಂದಾಯಿಸಿಕೊಳ್ಳುವಾಗ ಅವರಿಗೆ 40 ಗಂಟೆ ತರಬೇತಿ ಕೊಟ್ಟಿರಬೇಕು. ಅಗತ್ಯಬಿದ್ದರೆ ಮೂರು ತಿಂಗಳಿಗೊಮ್ಮೆಯೋ, ವರ್ಷಕ್ಕೊಮ್ಮೆಯೋ ರೀಫ್ರೆಶರ್ ಕೋರ್ಸ್ ನೀಡಬೇಕು.
*ಕ್ಯಾಬ್ ಅಗ್ರಿಗೇಟರ್ಗಳು CERT-in ಸೈಬರ್ ಸೆಕ್ಯೂರಿಟಿ ಗೈಡ್ಲೈನ್ಸ್ ಪಾಲಿಸಬೇಕು. ಎಐಎಸ್-140 ಟ್ರ್ಯಾಕಿಂಗ್ ಸಿಸ್ಟಮ್ಸ್ ಬಳಸಬೇಕು; ಪ್ಯಾನಿಕ್ ಬಟನ್, ಕಂಟ್ರೋಲ್ ಸೆಂಟರ್ ಇತ್ಯಾದಿ ವ್ಯವಸ್ಥೆ ಇರಬೇಕು. ಇಂಗ್ಲೀಷ್, ಹಿಂದಿ ಅಥವಾ ಸ್ಥಳೀಯ ಭಾಷೆಯಲ್ಲಿನ ಯೂಸರ್ ಇಂಟರ್ಫೇಸ್ ಹೊಂದಿರಬೇಕು.
*ಅಗ್ರಿಗೇಟರ್ಗಳು ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಿಸಲು ಗಮನ ಕೊಡಬೇಕು.
*ವಾಹನವು ಡ್ರೈವರ್ಗಳ ಸ್ವಂತದ್ದಾಗಿದ್ದರೆ ಡ್ರೈವರ್ಗಳಿಗೆ ದರದಲ್ಲಿ ಕನಿಷ್ಠ ಶೇ. 80 ಪಾಲು ಹೋಗಬೇಕು. ಅಗ್ರಿಗೇಟರ್ಗಳಿಗೆ ವಾಹನ ಸೇರಿದ್ದಾದರೆ ಕನಿಷ್ಠ ಶೇ. 60ರಷ್ಟು ದರವು ಡ್ರೈವರ್ಗೆ ಸಂದಾಯವಾಗಬೇಕು
*ಆ್ಯಪ್ ಮೂಲಕ ಎಲ್ಲಾ ಸೇವೆ ನಡೆಯಬೇಕು. ಲೈವ್ ಟ್ರ್ಯಾಕಿಂಗ್, ಡ್ರೈವರ್ ರೇಟಿಂಗ್, ಎಮರ್ಜೆನ್ಸಿ ಬಟನ್ ಇತ್ಯಾದಿ ಸೌಲಭ್ಯ ಇರಬೇಕು.
*ಅಗ್ರಿಗೇಟರ್ಗಳು ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಆ್ಯಕ್ಟ್ನ ನಿಯಮಾವಳಿಗೆ ಬದ್ಧವಾಗಿರಬೇಕು.
*ಕ್ಯಾಬ್ ಅಗ್ರಿಗೇಟರ್ಗಳ ವಾಹನಗಳಲ್ಲಿ ಎಷ್ಟು ವಾಹನಗಳು ದಿವ್ಯಾಂಗ ಸ್ನೇಹಿಯಾಗಿರಬೇಕು ಎಂಬುದನ್ನು ರಾಜ್ಯ ಸರ್ಕಾರಗಳು ನಿರ್ಧರಿಸಬಹುದು.
*ಅಗ್ರಿಗೇಟರ್ಗಳು ಹೊಸ ಪರವಾನಿಗೆ ಪಡೆಯಲು 5 ಲಕ್ಷ ರೂ, ಲೈಸೆನ್ಸ್ ನವೀಕರಣಕ್ಕೆ 25,000 ರೂ ಶುಲ್ಕ ನೀಡಬೇಕು.
*ಕ್ಯಾಬ್ ಅಗ್ರಿಗೇಟರ್ಗಳು 100 ಬಸ್ ಅಥವಾ 1,000 ಇತರ ವಾಹನಗಳನ್ನು ಚಲಾಯಿಸುತ್ತಿದ್ದರೆ ಸೆಕ್ಯೂರಿಟಿ ಡೆಪಾಸಿಟ್ ಆಗಿ 10 ಲಕ್ಷ ರೂ ನೀಡಬೇಕು. ಅದೇ ಪ್ರಮಾಣದಲ್ಲಿ ವಾಹನಗಳ ಸಂಖ್ಯೆ ಹೆಚ್ಚಿದಂತೆ ಸೆಕ್ಯೂರಿಟಿ ಡೆಪಾಸಿಟ್ ಪ್ರಮಾಣವೂ ಹೆಚ್ಚು ಇರುತ್ತದೆ.