ಧಾರವಾಡ, ಜು. 02 (DaijiworldNews/AA): ಇತ್ತೀಚೆಗೆ ಬೆಳಗಾವಿಯ ಸಾರ್ವಜನಿಕ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯವರಿಂದ ಅವಮಾನಕ್ಕೀಡಾದ ಹಿನ್ನೆಲೆ ಧಾರವಾಡ ಎಎಸ್ಪಿ ನಾರಾಯಣ ಬರಮಣ್ಣಿ ಅವರು ಸ್ವಯಂ ನಿವೃತ್ತಿಗೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ನಾರಾಯಣ ಭರಮನಿ ಅವರು ಸ್ವಯಂ ನಿವೃತ್ತಿ ಕೋರಿ ಎರಡು ಪುಟಗಳ ಪತ್ರ ಬರೆದಿದಿದ್ದಾರೆ. ಈ ಪತ್ರದಲ್ಲಿ ತಮಗಾದ ಅವಮಾನದ ಬಗ್ಗೆ ಹೇಳಿಕೊಂಡಿದ್ದಾರೆ. ಆದರೆ, ಇದರಿಂದ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಬರುವ ಸಾಧ್ಯತೆ ಇರುವುದರಿಂದ ಹಿರಿಯ ಅಧಿಕಾರಿಗಳು ನಾರಾಯಣ ಭರಮನಿ ಅವರ ಮನವೊಲಿಕೆ ಯತ್ನ ನಡೆಸಿದ್ದಾರೆ ಎನ್ನಲಾಗಿದೆ.
ಇನ್ನು ಎಎಸ್ಪಿ ಭರಮನಿ ಸ್ವಯಂ ನಿವೃತ್ತಿಗೆ ಮುಂದಾಗಿರುವ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ದು, ಸಿಎಂ ಬಹಿರಂಗವಾಗಿ ಅಧಿಕಾರಿ ಜತೆ ಈ ರೀತಿ ನಡೆದುಕೊಂಡಿದ್ದಾರೆ. ಇನ್ನೂ ಆಂತರಿಕವಾಗಿ ಅವರು ಯಾವ ರೀತಿ ನಡೆದುಕೊಳ್ಳಬಹುದು? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಕಾಂಗ್ರೆಸ್ ಪ್ರತಿಭಟನಾ ಸಭೆ ವೇಳೆ ಸಿಎಂ ಭಾಷಣ ಮಾಡುತ್ತಿರುವಾಗಲೇ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ಮಾಡಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಸಿದ್ದರಾಮಯ್ಯ, "ಏಯ್.. ಯಾರಿಲ್ಲಿ ಎಸ್ಪಿ" ಬಾರಯ್ಯ ಇಲ್ಲಿ ಎಂದು ವೇದಿಕೆ ಮೇಲೆ ಕರೆದು ನಾರಾಯಣ ಭರಮನಿ ಅವರ ಮೇಲೆ ಕಪಾಳಮೋಕ್ಷಕ್ಕೆ ಮುಂದಾಗಿದ್ದರು. ಸಿಎಂ ಸಾರ್ವಜನಿಕವಾಗಿ ಕೈ ಎತ್ತಿದ ಹಿನ್ನೆಲೆ ಪೊಲೀಸ್ ಅಧಿಕಾರಿ ನೊಂದುಕೊಂಡಿದ್ದರು. ಹೀಗಾಗಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.