ಮಧ್ಯಪ್ರದೇಶ, ಜು. 09 (DaijiworldNews/TA): ಏಷ್ಯಾದ ಅತ್ಯಂತ ಹಿರಿಯ ಆನೆ ಎಂದು ಪರಿಗಣಿಸಲಾದ 'ವತ್ಸಲಾ' ಮಂಗಳವಾರ ಮಧ್ಯಪ್ರದೇಶದ ಪನ್ನಾ ಹುಲಿ ಅಭಯಾರಣ್ಯದಲ್ಲಿ ಸಾವನ್ನಪ್ಪಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 100 ವರ್ಷಕ್ಕೂ ಹೆಚ್ಚು ವಯಸ್ಸಿನ ಆನೆ ಎಂದು ಹೇಳಲಾಗಿದೆ.

ಕೇರಳದಿಂದ ನರ್ಮದಾಪುರಂಗೆ ಹೆಣ್ಣು ಆನೆಯನ್ನು ಕರೆತರಲಾಯಿತು ಮತ್ತು ನಂತರ ಪನ್ನಾ ಹುಲಿ ಅಭಯಾರಣ್ಯಕ್ಕೆ ಸ್ಥಳಾಂತರಿಸಲಾಗಿತ್ತು. "ವತ್ಸಲಾವನ್ನು ಏಷ್ಯಾದ ಅತ್ಯಂತ ಹಿರಿಯ ಆನೆ ಎಂದು ಪರಿಗಣಿಸಲಾಗಿತ್ತು. ಅದರ ಅಂತ್ಯಕ್ರಿಯೆಯನ್ನು ಪನ್ನಾ ಹುಲಿ ಮೀಸಲು ಪ್ರದೇಶದ ಅಧಿಕಾರಿಗಳು ಮತ್ತು ನೌಕರರು ನೆರವೇರಿಸಿದರು" ಎಂದು ಹೇಳಿಕೆ ತಿಳಿಸಿದೆ.
ವರ್ಷಗಳ ಕಾಲ, ವತ್ಸಲಾ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಮತ್ತು ಅತ್ಯಂತ ಹಿರಿಯ ಆನೆಯಾಗಿದ್ದರಿಂದ, ವತ್ಸಲಾ ಅಭಯಾರಣ್ಯದಲ್ಲಿ ಇಡೀ ಆನೆಗಳ ಗುಂಪಿಗೆ ರಾಣಿಯಂತಿತ್ತು ಎಂದು ಹೇಳಲಾಗಿದೆ. ಇತರ ಹೆಣ್ಣು ಆನೆಗಳು ಮರಿಗಳಿಗೆ ಜನ್ಮ ನೀಡಿದಾಗ, ಅದು ಅಜ್ಜಿಯ ಪಾತ್ರವನ್ನು ನಿರ್ವಹಿಸುತ್ತಿತ್ತು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ, ವತ್ಸಲಾಳ ಮುಂಭಾಗದ ಕಾಲ್ಬೆರಳ ಉಗುರುಗಳು ಗಾಯಗೊಂಡಿದ್ದವು. ಹಿನೌಟಾ ಪ್ರದೇಶದ ಖೈರೈಯಾನ್ ನಾಲಾ ಬಳಿ ಮಲಗಿತ್ತು. ಎಷ್ಟೇ ಪ್ರಯತ್ನ ಮಾಡಿದರೂ ಎದ್ದೇಳಲು ಸಾಧ್ಯವಾಗಿಲ್ಲ. ಮಧ್ಯಾಹ್ನ 1.30 ರ ಸುಮಾರಿಗೆ ಮೃತಪಟ್ಟಿದೆ. ವೃದ್ಧಾಪ್ಯದ ಕಾರಣ, ವತ್ಸಲಾ ತನ್ನ ದೃಷ್ಟಿಯನ್ನು ಕಳೆದುಕೊಂಡಿದ್ದಳು ಮತ್ತು ಹೆಚ್ಚು ದೂರ ನಡೆಯಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.