ಚಂಡೀಗಢ, ಜು. 12 (DaijiworldNews/AA): ಟೆನ್ನಿಸ್ ಆಟಗಾರ್ತಿ ಮಗಳನ್ನು ಗುಂಡಿಕ್ಕಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತಂದೆ ದೀಪಕ್ ಯಾದವ್ನನ್ನು ಗುರುಗ್ರಾಮ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ.

ದೀಪಕ್ನನ್ನು ಬಂಧಿಸಿದ ಗುರುಗ್ರಾಮ ಪೊಲೀಸರು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ಕೋರ್ಟ್ ದೀಪಕ್ ಯಾದವ್ನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ರಾಜ್ಯ ಮಟ್ಟದ ಟೆನ್ನಿಸ್ ಆಟಗಾರ್ತಿ ರಾಧಿಕಾಳನ್ನು (25) ಜುಲೈ 10 ರಂದು ಗುರುಗ್ರಾಮದಲ್ಲಿರುವ ಮನೆಯಲ್ಲಿ ತಂದೆ ದೀಪಕ್ ಯಾದವ್ ರಿವಾಲ್ವರ್ನಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ.
ದೀಪಕ್ ಯಾದವ್ ಅವರ ಊರಾದ ವಜೀರಾಬಾದ್ಗೆ ತೆರಳಿದ್ದ ಸಂದರ್ಭ ಗ್ರಾಮಸ್ಥರು ಮತ್ತು ಗೆಳೆಯರು ಅವರನ್ನು ನಿಂದಿಸಿದ್ದರು. ಇದರಿಂದ ದೀಪಕ್ ಕೋಪಗೊಂಡಿದ್ದರು. ಅವರ ಗೆಳೆಯರು, ಸಂಬಬಂಧಿಕರು ದೀಪಕ್ ತಮ್ಮ ಮಗಳ ಟೆನಿಸ್ ಅಕಾಡೆಮಿಯಿಂದ ಪಡೆಯುವ ಆದಾಯದಿಂದ ಬದುಕುತ್ತಿದ್ದಕ್ಕಾಗಿ ಅಪಹಾಸ್ಯ ಮಾಡಿದ್ದರು. ಇದರಿಂದ ದೀಪಕ್ ಯಾದವ್ ಮಗಳ ಮೇಲೆ ಕೋಪಗೊಂಡಿದ್ದರು. ಮಗಳಿಗೆ ಟೆನಿಸ್ ಅಕಾಡೆಮಿ ಮುಚ್ಚುವಂತೆ ಅನೇಕ ಬಾರಿ ಹೇಳಿದ್ದರು. ಆದರೆ, ಅದಕ್ಕೆ ಆಕೆ ಒಪ್ಪಿರಲಿಲ್ಲ. ಇದೇ ವಿಚಾರಕ್ಕೆ ಜಗಳವಾಡಿ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತಂದೆ ತನ್ನ ಮಗಳ ವೃತ್ತಿಜೀವನ ಮತ್ತು ಗಳಿಕೆಯ ಬಗ್ಗೆ ಸಾಮಾಜಿಕ ಟೀಕೆಗಳಿಂದಾಗಿ ಕಳೆದ 15 ದಿನಗಳಿಂದ ಖಿನ್ನತೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆ ಗುರುವಾರ ಮಗನನ್ನು ಹಾಲು ತರಲೆಂದು ಮನೆಯಿಂದ ಹೊರಗೆ ಕಳುಹಿಸಿ ಅಡುಗೆ ಮಾಡುತ್ತಿದ್ದ ಮಗಳ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.