ನವದೆಹಲಿ, ಜು. 12 (DaijiworldNews/AA): ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವುದು ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸುವುದಿಲ್ಲ. ಅಲ್ಲದೇ ಹೆಚ್ಚಿನ ಸ್ಪಷ್ಟತೆಗಾಗಿ ಮಸೂದೆಯ ಕೆಲವು ನಿಬಂಧನೆಗಳನ್ನು, ವಿಶೇಷವಾಗಿ ಚುನಾವಣಾ ಆಯೋಗದ ಅಧಿಕಾರಗಳು ಮತ್ತು ತುರ್ತು ಪರಿಸ್ಥಿತಿಗಳ ಬಗ್ಗೆ ಪರಿಶೀಲನೆಯಾಗಬೇಕು ಎಂದು ನಿವೃತ್ತ ಸಿಜೆಐ ಡಿ.ವೈ ಚಂದ್ರಚೂಡ್ ತಿಳಿಸಿದ್ದಾರೆ.

ಮಸೂದೆ ಕುರಿತ ಜಂಟಿ ಸಂಸದೀಯ ಸಮಿತಿ ಏರ್ಪಡಿಸಿದ್ದ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ಅಸಮಕಾಲಿಕ ಅಥವಾ ಏಕಕಾಲಿಕವಲ್ಲದ ಚುನಾವಣೆಗಳು ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳಿಗೆ ಅತ್ಯಗತ್ಯ ಸ್ಥಿತಿಯಲ್ಲ. ಆದ್ದರಿಂದ ಇದನ್ನು ಸಂವಿಧಾನದ ಮೂಲ ಚೌಕಟ್ಟಿನ ಭಾಗವಾಗಿ ನೋಡಲಾಗುವುದಿಲ್ಲ. ವಾಸ್ತವವಾಗಿ, ಗಣರಾಜ್ಯದ ಆರಂಭಿಕ ವರ್ಷಗಳಲ್ಲಿ ಸಂವಿಧಾನದ ಮೂಲ ವಿನ್ಯಾಸವು ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವುದಾಗಿತ್ತು ಎಂದಿದ್ದಾರೆ.
ವಿಧಾನಿಕ ಮಿತಿಯೊಳಗೆ ಚುನಾವಣೆಗಳನ್ನು ನಡೆಸಿದರೆ, ವಿಧಾನಸಭೆಯ ಅಧಿಕಾರಾವಧಿಯನ್ನು ಮೊಟಕುಗೊಳಿಸಿದರೂ ಮತದಾರರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕನ್ನು ಉಲ್ಲಂಘಿಸುವುದಿಲ್ಲ ಎಂದು ಹೇಳಿದರು.
ಏಕಕಾಲದಲ್ಲಿ ಚುನಾವಣೆಗಳು ಸ್ಥಳೀಯ ಸಮಸ್ಯೆಗಳನ್ನು ಮರೆಮಾಡಬಹುದು ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಭಾಷಾ ಸಂಬಂಧಿತ ಉದಾಹರಣೆಯನ್ನು ಉಲ್ಲೇಖಿಸಿದರು. ಅವು ಸಾಮಾನ್ಯವಾಗಿ ಸ್ಥಳೀಯವಾಗಿರುತ್ತವೆ. ಆದರೆ ರಾಷ್ಟ್ರೀಯ ಚುನಾವಣಾ ಚರ್ಚೆಯ ಭಾಗವಾಗಿ ಹೊರ ಹೊಮ್ಮಬಹುದು ಎಂದು ಅಭಿಪ್ರಾಯಪಟ್ಟರು.
ರಾಜಕೀಯ ಸ್ಥಿರತೆಯ ಕುರಿತು ಮಾತನಾಡಿದ ಅವರು, ಸುಗಮ ಆಡಳಿತವನ್ನು ಖಚಿತಪಡಿಸಿಕೊಳ್ಳಲು ಅವಿಶ್ವಾಸ ನಿರ್ಣಯಗಳ ಮೇಲೆ ಮಿತಿಗಳನ್ನು ಹಾಕಬಹುದು. ಇದಕ್ಕೆ ಸಾಂವಿಧಾನಿಕ ತಿದ್ದುಪಡಿ ಅಗತ್ಯವಿಲ್ಲ. ಸದನದ ನಿಯಮಗಳಲ್ಲಿ ಬದಲಾವಣೆಗಳ ಮೂಲಕ ಇದನ್ನು ಕಾರ್ಯಗತಗೊಳಿಸಬಹುದು ಎಂದರು.