ಮಧ್ಯಪ್ರದೇಶ, ಜು. 13 (DaijiworldNews/AA): ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಪಿಎಸ್ ಅಧಿಕಾರಿಯಾಗುವುದು ಅನೇಕ ಆಕಾಂಕ್ಷಿಗಳ ಕನಸು. ಕೆಲವರು ತಮ್ಮ ಉತ್ತಮ ವೇತನದ ಉದ್ಯೋಗಗಳನ್ನು ತ್ಯಜಿಸಿ ಯುಪಿಎಸ್ಸಿ ಬರೆದು ಐಎಎಸ್, ಐಪಿಎಸ್, ಐಎಫ್ಎಸ್ ಅಧಿಕಾರಿಯಾಗುತ್ತಾರೆ. ಹೀಗೆ ಐಐಟಿಯಿಂದ ಪದವಿ ಪಡೆದು, ಲಂಡನ್ನಲ್ಲಿ ಉತ್ತಮ ಸಂಬಳದ ಕೆಲಸದಲ್ಲಿದ್ದ ಆಶೀಶ್ ತಿವಾರಿ ಅವರು ಭಾರತಕ್ಕೆ ಮರಳಿ, ಯುಪಿಎಸ್ಸಿ ಪರೀಕ್ಷೆ ಬರೆದು ಐಪಿಎಸ್ ಅಧಿಕಾರಿಯಾಗುವಲ್ಲಿ ಯಶಸ್ವಿಯಾಗುತ್ತಾರೆ.

ಆಶೀಶ್ ತಿವಾರಿ ಅವರು ಮಧ್ಯಪ್ರದೇಶದ ಹೋಶಂಗಾಬಾದ್ನ ನಿವಾಸಿ. ಅವರ ತಂದೆ, ಕೈಲಾಶ್ ನಾರಾಯಣ ತಿವಾರಿ, ರೈಲ್ವೆಯಲ್ಲಿ ಇಂಜಿನಿಯರ್ ಆಗಿದ್ದರು.
ಆಶೀಶ್ ತಮ್ಮ ಶಾಲಾ ಶಿಕ್ಷಣವನ್ನು ಹೋಶಂಗಾಬಾದ್ನ ಕೇಂದ್ರೀಯ ವಿದ್ಯಾಲಯದಲ್ಲಿ (ಕೆವಿ) ಪೂರ್ಣಗೊಳಿಸಿದರು. ಅವರು ಖರಗ್ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯಿಂದ 2007ರಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ನಲ್ಲಿ ಬಿ. ಟೆಕ್ (ಎಚ್) ಮತ್ತು ಎಂ. ಟೆಕ್ ಪದವಿ ಪಡೆದರು. ಇತ್ತೀಚೆಗೆ ಅವರು ಹಾರ್ವರ್ಡ್ ಕೆನಡಿ ಶಾಲೆಯಿಂದ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ.
2012ರ ಬ್ಯಾಚ್ನ ಉತ್ತರ ಪ್ರದೇಶ ಕೇಡರ್ನ ಐಪಿಎಸ್ ಅಧಿಕಾರಿ. ತಮ್ಮ ಮೊದಲ ಪ್ರಯತ್ನದಲ್ಲಿ, ಅವರು ಅಖಿಲ ಭಾರತ 330ನೇ ರ್ಯಾಂಕ್ ಪಡೆದು ಭಾರತೀಯ ಕಂದಾಯ ಸೇವೆಗೆ (ಐಆರ್ಎಸ್) ಸೇರಿದರು. ತಮ್ಮ ಮುಂದಿನ ಪ್ರಯತ್ನದಲ್ಲಿ, ಅವರು ಕಠಿಣ ಪರಿಶ್ರಮದಿಂದ 2012ರಲ್ಲಿ 219ನೇ ಅಖಿಲ ಭಾರತ ರ್ಯಾಂಕ್ನೊಂದಿಗೆ ಐಪಿಎಸ್ ಅಧಿಕಾರಿಯಾದರು. ಆಶೀಶ್ ಅವರನ್ನು ಯುಪಿ ಕೇಡರ್ (ಐಪಿಎಸ್-ಆರ್ಆರ್ 2012) ನಿಯೋಜಿಸಲಾಯಿತು. ಪ್ರಸ್ತುತ ಐಪಿಎಸ್ ಆಶೀಶ್ ತಿವಾರಿ ಅವರು ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ಎಸ್ಎಸ್ಪಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಐಪಿಎಸ್ ಆಶೀಶ್ ಅವರು ಎಎಸ್ಪಿ ಝಾನ್ಸಿ, ಎಸ್ಪಿ ಗ್ರಾಮೀಣ ವಾರಣಾಸಿ, ಎಸ್ಪಿ ಮಿರ್ಜಾಪುರ್, ಎಸ್ಎಸ್ಪಿ ಎಟಾ, ಎಸ್ಪಿ ಜಾನ್ಪುರ್, ಎಸ್ಎಸ್ಪಿ ಅಯೋಧ್ಯೆ, ಸ್ಥಾಪಕ ಕಮಾಂಡೆಂಟ್-ಸ್ಪೆಷಲ್ ಸೆಕ್ಯುರಿಟಿ ಫೋರ್ಸ್ (ಎಸ್ಎಸ್ಎಫ್), ಎಸ್ಪಿ ಎಲೆಕ್ಷನ್ (ಯುಪಿ), ಎಸ್ಎಸ್ಪಿ ಫಿರೋಜಾಬಾದ್ ಮುಂತಾದ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಕೆಲಸದ ಅನುಭವದಲ್ಲಿ ಇನ್ವೆಸ್ಟ್ಮೆಂಟ್ ಬ್ಯಾಂಕ್ಗಳಾದ ಲೆಹ್ಮನ್ ಬ್ರದರ್ಸ್ ಮತ್ತು ನೋಮುರಾ ಮತ್ತು ಆದಾಯ ತೆರಿಗೆ ಸಹಾಯಕ ಆಯುಕ್ತರಾಗಿ (ಐಆರ್ಎಸ್) ಸೇವೆ ಸಲ್ಲಿಸಿರುತ್ತಾರೆ.