ನವದೆಹಲಿ, ಜೂ25(Daijiworld News/SS): ಮೇ 18ರಂದು ಪ್ರಧಾನಿ ನರೇಂದ್ರ ಮೋದಿ ಕೇದಾರನಾಥದಲ್ಲಿರುವ ಗುಹೆಯಲ್ಲಿ 24 ಗಂಟೆಗಳು ಸುದೀರ್ಘ ಧ್ಯಾನ ಮಾಡಿ ಎಲ್ಲೆಡೆ ಸುದ್ದಿಯಾಗಿದ್ದರು. ಹಾಗೆಯೇ ಹಲವರ ಗಮನ ಸೆಳೆದಿದ್ದರು. ಇದೀಗ ಈ ಗುಹೆಗೆ ಧ್ಯಾನ ಮಾಡಲು ಯಾತ್ರಿಕರು ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸಿ ಬರುತ್ತಿದ್ದಾರೆ. ಮಾತ್ರವಲ್ಲ, ಮೋದಿಯವರ ಕೇದಾರನಾಥ ಭೇಟಿಯಿಂದ ಪ್ರವಾಸೋದ್ಯಮಕ್ಕೆ ಭಾರಿ ಉತ್ತೇಜನ ದೊರೆತಿದೆ ಎಂದು ತಿಳಿದುಬಂದಿದೆ.
ಮೋದಿ ಧ್ಯಾನ ಮಾಡಿದ್ದ ಕೇದಾರನಾಥ ಗುಹೆಗೆ ಹೆಚ್ಚಿನ ಬೇಡಿಕೆ ಬಂದಿದೆ. 2018ರಲ್ಲಿ ಆರು ತಿಂಗಳ ಅವಧಿಯಲ್ಲಿ ಕೇದಾರನಾಥಕ್ಕೆ 7.32 ಲಕ್ಷ ಭಕ್ತರು ಬಂದಿದ್ದರು. ಈ ವರ್ಷ 45 ದಿನಗಳ ಅವಧಿಯಲ್ಲಿ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ 7.35 ಲಕ್ಷ ಪ್ರವಾಸಿಗರು ಆಗಮಿಸಿದ್ದಾರೆ. ಈ ಬಾರಿ ದಾಖಲೆ ಪ್ರಮಾಣದಲ್ಲಿ ಒಂದೇ ದಿನ 36000ಕ್ಕೂ ಹೆಚ್ಚಿನ ಭಕ್ತರು ದೇವಾಲಯಕ್ಕೆ ಆಗಮಿಸಿದ್ದಾರೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.
ಈ ಕುರಿತು ಗರ್ವಾಲ್ ಮಂಡಲ್ ವಿಕಾಸ ನಿಗಮ(ಜಿಎಂವಿಎನ್) ಜನರೆಲ್ ಮ್ಯಾನೇಜರ್ ಬಿ.ಎಲ್ ರಾಣಾ ಅವರು ಮಾತನಾಡಿದ್ದು, ಪ್ರಧಾನಿ ಅವರು ಬಂದು ಹೋದ ಬಳಿಕ ಈ ಗುಹೆಯಲ್ಲಿ ಧ್ಯಾನ ಮಾಡಲು ಬರುವ ಯಾತ್ರಿಕರ ಸಂಖ್ಯೆ ಹೆಚ್ಚಾಗಿದೆ. ಈಗಾಗಲೇ ಸುಮಾರು 20 ಮಂದಿ ಇಲ್ಲಿ ಧ್ಯಾನ ಮಾಡಿದ್ದಾರೆ. ಅಲ್ಲದೆ ಆನ್ಲೈನ್ ಮೂಲಕ ನಾವು ಗುಹೆಯನ್ನು ಬುಕ್ ಮಾಡುವ ಸೌಲಭ್ಯ ಒದಗಿಸಿದ್ದೇವೆ. ಹೀಗಾಗಿ ದೇಶದೆಲ್ಲೆಡೆಯಿಂದ ಯಾತ್ರಿಕರು ಆನ್ಲೈನ್ ಬುಕ್ಕಿಂಗ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಕೇದಾರನಾಥ ದೇವಾಲಯದಿಂದ ಅರ್ಧ ಕಿಮೀ ದೂರದಲ್ಲಿ ಹಲವು ಗುಹೆಗಳನ್ನು ನಿರ್ಮಾಣ ಮಾಡಲಾಗಿದೆ. ಭಕ್ತರು ಏಕಾಂತದಲ್ಲಿ ಧ್ಯಾನ ಮಾಡಲು ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಇದನ್ನು ನಿರ್ಮಾಣ ಮಾಡಲಾಗಿತ್ತು. ಇದಕ್ಕೆ ಬುಕಿಂಗ್ ವ್ಯವಸ್ಥೆ ಇತ್ತಾದರೂ, ಬಹುತೇಕ ಖಾಲಿಯೇ ಉಳಿಯುತ್ತಿತ್ತು. ಆದರೆ ಮೋದಿ ಇಲ್ಲಿಗೆ ತೆರಳಿ ಧ್ಯಾನ ಮಾಡಿದ ಬಳಿಕ ನಿರೀಕ್ಷೆಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬುಕಿಂಗ್ ಮಾಡುತ್ತಿದ್ದಾರೆ. ಗುಹೆ ಸಣ್ಣದಾಗಿರುವುದರಿಂದ ಒಮ್ಮೆ ಓರ್ವನಿಗೆ ಮಾತ್ರ ಇದರೊಳಗೆ ತೆರಳಲು ಅವಕಾಶ ನೀಡಲಾಗುತ್ತದೆ ಎನ್ನಲಾಗಿದೆ.
ಯಾತ್ರಿಕರು ಆರೋಗ್ಯವಾಗಿದ್ದರೆ ಮಾತ್ರ ಅವರಿಗೆ ಗುಹೆಯಲ್ಲಿ 24 ಗಂಟೆಗಳ ಕಾಲ ಏಕಾಂಗಿಯಾಗಿ ಧ್ಯಾನ ಮಾಡಲು ಅವಕಾಶ ನೀಡಲಾಗುತ್ತದೆ. ಸದ್ಯ ಮುಂದಿನ 10 ದಿನಗಳ ತನಕ ಕೇದಾರನಾಥ ಗುಹೆ ಯಾತ್ರಿಕರ ಧ್ಯಾನಕ್ಕೆ ಬುಕ್ ಆಗಿದೆ.