ಜಮ್ಮು ಮತ್ತು ಕಾಶ್ಮೀರ, ಆ. 03 (DaijiworldNews/AA): ಭಯೋತ್ಪಾದನಾ ನಿಗ್ರಹ ಕೈಗೊಂಡ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಓರ್ವ ಸೈನಿಕರು ಗಾಯಗೊಂಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ.

ಭಾರತೀಯ ಸೇನೆಯು ಆಪರೇಷನ್ ಅಖಾಲ್ ಅಡಿಯಲ್ಲಿ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದೆ. ಈ ಕಾರ್ಯಾಚರಣೆ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಶನಿವಾರ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಇದೀಗ ಭಾನುವಾರ ಕೂಡ ಮೂವರು ಉಗ್ರರನ್ನು ಸದಬಡಿಯಲಾಗಿದೆ ಎಂದು ತಿಳಿದುಬಂದಿದೆ.
ದಕ್ಷಿಣ ಕಾಶ್ಮೀರದ ಕುಲ್ಗಮ್ ಜಿಲ್ಲೆಯ ಅಖಾಲ್ ಅರಣ್ಯ ಪ್ರದೇಶದಲ್ಲಿ ರಾತ್ರಿಯಿಡೀ ಸ್ಫೋಟಗಳು ಮತ್ತು ಗುಂಡಿನ ಸದ್ದುಗಳು ಕೇಳಿಬರುತ್ತಿದ್ದವು. ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಸೇನೆ ಮತ್ತು ಸಿಆರ್ಪಿಎಫ್ ಜಂಟಿ ತಂಡ ಮತ್ತು ಭಯೋತ್ಪಾದಕರ ನಡುವಿನ ಎನ್ಕೌಂಟರ್ ಇನ್ನೂ ಮುಂದುವರೆದಿದೆ.
ಶುಕ್ರವಾರ, ಅಖಾಲ್ ಅರಣ್ಯದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಗುಪ್ತಚರ ಮಾಹಿತಿ ಪಡೆದ ನಂತರ ಭದ್ರತಾ ಪಡೆಗಳು ಸುತ್ತುವರಿದು ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದವು. ಕಾಡಿನಲ್ಲಿ ಅಡಗಿಕೊಂಡಿದ್ದ ಭಯೋತ್ಪಾದಕರ ಗುಂಪೊಂದು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದ ನಂತರ ಉಗ್ರರನ್ನು ಎನ್ಕೌಂಟರ್ ಮಾಡಲಾಯಿತು.