ಬೆಂಗಳೂರು, ಆ. 09 (DaijiworldNews/AK): ಆಪರೇಷನ್ ಸಿಂಧೂರ್ ಸಮಯದಲ್ಲಿ ಐದು ಯುದ್ಧ ವಿಮಾನಗಳು ಮತ್ತು ಇನ್ನೊಂದು ದೊಡ್ಡ ವಿಮಾನ ಸೇರಿದಂತೆ ಆರು ಪಾಕಿಸ್ತಾನಿ ವಿಮಾನಗಳನ್ನು ಹೊಡೆದುರುಳಿಸಲಾಯಿತು ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಶಹಬಾಜ್ ಜಕೋಬಾಬಾದ್ ವಾಯುನೆಲೆಯಲ್ಲಿ ಪಾಕಿಸ್ತಾನಿ ವಾಯುಪಡೆಯ ಕೆಲವು F-16 ಫೈಟರ್ ಜೆಟ್ಗಳು ಸಹ ನಾಶವಾಗಿವೆ ಎಂದು ಅವರು ಹೇಳಿದ್ದಾರೆ. ಇದಲ್ಲದೆ, ಆಪರೇಷನ್ ಸಿಂಧೂರ್ ಸಮಯದಲ್ಲಿ ಮುರಿಯ್ ಮತ್ತು ಚಕ್ಲಾಲಾದಂತಹ ಎರಡು ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳು ಸಹ ಹಾನಿಗೊಳಗಾಗಿವೆ ಎಂದರು.
ಒಂದು ದೊಡ್ಡ ವಿಮಾನವನ್ನು ಕೂಡ ಹೊಡೆದುರುಳಿಸಲಾಗಿದ್ದು, ಅದು ELINT ವಿಮಾನ ಅಥವಾ AWACS (ವಾಯುಗಾಮಿ ಎಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆ) ಆಗಿರಬಹುದು. ಇದನ್ನು ಸುಮಾರು 300 ಕಿಲೋಮೀಟರ್ ದೂರದಿಂದ ಹೊಡೆದುರುಳಿಸಲಾಗಿದೆ ಎಂದಿದ್ದಾರೆ.
ಭಾರತ ಇತ್ತೀಚೆಗೆ ಖರೀದಿಸಿದ್ದ S-400 ವಾಯು ರಕ್ಷಣಾ ವ್ಯವಸ್ಥೆಯನ್ನು ಶ್ಲಾಘಿಸಿದ ಅವರು, ಆಪರೇಷನ್ ಸಿಂಧೂರ್ ಸಮಯದಲ್ಲಿ ಅದು ಅದ್ಭುತ ಕೆಲಸ ಮಾಡಿದೆ ಎಂದು ಹೇಳಿದ್ದಾರೆ. ಹಾಗೇ S-400ಗಳನ್ನು “ಗೇಮ್-ಚೇಂಜರ್” ಎಂದು ಅವರು ಕರೆದಿದ್ದಾರೆ.