ಪಂಜಾಬ್, ,ಆ. 10(DaijiworldNews/AK): ಯುಪಿಎಸ್ ಸಿ ಪಯಣದಲ್ಲಿ ಕುಟುಂಬದ ಬೆಂಬಲ ತುಂಬಾನೇ ಮುಖ್ಯ. ಕೌಟುಂಬಿಕ ಸಮಸ್ಯೆಗಳಿದ್ದರೆ ಇಂತಹ ಕಠಿಣ ಪರೀಕ್ಷೆಗೆ ಓದುವುದು ಅಸಾಧ್ಯ. ಆದರೆ ಅಂತಹ ಕಷ್ಟಗಳನ್ನು ಮೆಟ್ಟಿ ನಿಂತ ದಿಟ್ಟೆ ರಿತಿಕಾ ಜಿಂದಾಲ್ ಅವರ ಕಥೆ ಇಲ್ಲಿದೆ. ರಿತಿಕಾ ಕೇವಲ 22ನೇ ವಯಸ್ಸಿನಲ್ಲಿ UPSC ತೇರ್ಗಡೆಯಾಗುವ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಪಂಜಾಬ್ನ ಮೋಗಾದಲ್ಲಿ ಜನಿಸಿದ ರಿತಿಕಾ ಜಿಂದಾಲ್ ತನ್ನ ಗುರಿಯನ್ನು ಸಾಧಿಸಲು ಬಡತನ ಅಡ್ಡಿಯಾಗಲು ಬಿಡಲಿಲ್ಲ. ರಿತಿಕಾ ಯಾವಾಗಲೂ ಅಧ್ಯಯನದಲ್ಲಿ ಟಾಪರ್ ಆಗಿದ್ದರು. ಉತ್ತಮ ಅಂಕಗಳೊಂದಿಗೆ 10 ಮತ್ತು 12 ನೇ ತೇರ್ಗಡೆಯಾದ ನಂತರ, ದೆಹಲಿ ವಿಶ್ವವಿದ್ಯಾಲಯದ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ಗೆ ಪ್ರವೇಶ ಪಡೆದರು. ಪದವಿಯಲ್ಲೂ ಅಗ್ರಸ್ಥಾನ ಪಡೆದಿದ್ದರು. ಅವರು ಪದವಿಯಲ್ಲಿ 95% ಅಂಕಗಳನ್ನು ಹೊಂದಿದ್ದರು. ಇದರೊಂದಿಗೆ ಯುಪಿಎಸ್ ಸಿಗೂ ತಯಾರಿ ಆರಂಭಿಸಿದರು.
ರಿತಿಕಾ ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆಯುತ್ತಿದ್ದಾಗ ಆಕೆಯ ತಂದೆಗೆ ನಾಲಿಗೆಯಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಇದರ ನಂತರ, ಎರಡನೇ ಪ್ರಯತ್ನದಲ್ಲಿ ಅವರು ಶ್ವಾಸಕೋಶದ ಕ್ಯಾನ್ಸರ್ಗೆ ತುತ್ತಾಗಿದ್ದರು. ರಿತಿಕಾಗೆ ಇದು ತುಂಬಾ ಕಷ್ಟದ ಅವಧಿ. ಆದರೆ ಎಲ್ಲ ಕಷ್ಟಗಳ ನಡುವೆಯೂ ತನ್ನ ಮತ್ತು ತಂದೆಯ ಕನಸನ್ನು ನನಸು ಮಾಡಲು ದೃಢವಾಗಿ ನಿಂತಳು. ರಿತಿಕಾ ತನ್ನ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿಯ ಸಂದರ್ಶನದ ಸುತ್ತಿಗೆ ತಲುಪಿದ್ದರು. ಆದರೆ ಅಂತಿಮವಾಗಿ ಆಯ್ಕೆ ಆಗಲಿಲ್ಲ. ರಿತಿಕಾ ತನ್ನ ತಂದೆಯನ್ನು ಆಸ್ಪತ್ರೆಯಲ್ಲಿ ನೋಡಿಕೊಳ್ಳುತ್ತಲೇ UPSC ಪರೀಕ್ಷೆಗೆ ತಯಾರಿ ನಡೆಸಿದ್ದಳು.
ರಿತಿಕಾ 2018 ರಲ್ಲಿ UPSC ಸಿವಿಲ್ ಸರ್ವೀಸಸ್ ಪರೀಕ್ಷೆಯ ಎರಡನೇ ಪ್ರಯತ್ನವನ್ನು ನೀಡಿದರು. ಎರಡನೇ ಪ್ರಯತ್ನದಲ್ಲಿ ತಮ್ಮ ನ್ಯೂನತೆಗಳನ್ನು ಸರಿಪಡಿಸಿಕೊಂಡು ಯುಪಿಎಸ್ ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಅಖಿಲ ಭಾರತ 88ನೇ ರ್ಯಾಂಕ್ ನೊಂದಿಗೆ ತೇರ್ಗಡೆಯಾಗುವ ಮೂಲಕ ಐಎಎಸ್ ಆಗುವ ಕನಸನ್ನು ನನಸು ಮಾಡಿಕೊಂಡರು.
ಯುಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಐಎಎಸ್ ತರಬೇತಿ ಪಡೆಯುತ್ತಿದ್ದಾಗ ಆಕೆಯ ತಂದೆ ತೀರಿಕೊಂಡರು. ಇದು ಅವರಿಗೆ ದೊಡ್ಡ ಆಘಾತವಾಗಿತ್ತು. ಆದರೆ ತಂದೆ ತೀರಿಕೊಂಡ ಎರಡು ತಿಂಗಳಿಗೆ ತಾಯಿಯೂ ತೀರಿಕೊಂಡಾಗ ನೋವು ಭರಿಸುವ ಶಕ್ತಿ ರಿತಿಕಾಗೆ ಇರಲಿಲ್ಲ. ಪೋಷಕರ ನಿಧನ ರಿತಿಕಾಗೆ ದೊಡ್ಡ ಆಘಾತ ನೀಡಿದೆ. ಇಬ್ಬರಿಗೂ ತಮ್ಮ ಮಗಳ ಯಶಸ್ಸನ್ನು ನೋಡಲಾಗಲಿಲ್ಲ. ಆದರೆ ರಿತಿಕಾ ತಂದೆ-ತಾಯಿ ಇಷ್ಟವಾಗುವ ರೀತಿಯಲ್ಲಿ ಬದಕಬೇಕೆಂದು ನಿರ್ಧರಿಸಿದರು.