ಬೆಂಗಳೂರು,ಆ. 11 (DaijiworldNews/AK): ಕೊಪ್ಪಳದಲ್ಲಿ ಇತ್ತೀಚೆಗೆ ವಾಲ್ಮೀಕಿ ಸಮುದಾಯದ ಯುವ ಮುಖಂಡ, ಹಿಂದೂ ಮುಖಂಡ ಗವಿಸಿದ್ದಪ್ಪ ನಾಯಕ ಅವರ ಬರ್ಬರ ಹತ್ಯೆ ಮಸೀದಿ ಮುಂದೆಯೇ ನಡೆದಿದೆ. ಗವಿಸಿದ್ದಪ್ಪ ನಾಯಕ ಅವರ ಆತ್ಮಕ್ಕೆ ಶಾಂತಿ ಲಭಿಸುವ ಸಲುವಾಗಿ ರಾಜ್ಯ ಸರಕಾರವು ಈ ಪ್ರಕರಣದ ತನಿಖೆಯನ್ನು ಎನ್.ಐ.ಎಗೆ ವಹಿಸಬೇಕು ಅಥವಾ ಸಿ.ಬಿ.ಐ.ಗೆ ಹಸ್ತಾಂತರ ಮಾಡಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯ ಸರಕಾರವು ಈ ಘಟನೆಯನ್ನು ಹಗುರವಾಗಿ ಪರಿಗಣಿಸಬಾರದು ಎಂದು ಹೇಳಿದರು. ಈ ಹತ್ಯೆಯಿಂದ ಇಡೀ ಕೊಪ್ಪಳ ಜಿಲ್ಲೆಯಲ್ಲಿ ಆತಂಕ ಉಂಟಾಗಿದೆ ಎಂದು ವಿವರಿಸಿದರು. ಕೊಲೆಗಡುಕರು, ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುವ ಸಮಾಜಘಾತುಕ ಶಕ್ತಿಗಳು, ದೇಶದ್ರೋಹಿಗಳ ಚಟುವಟಿಕೆ ಹಿಂದೆ ಕರಾವಳಿ ಭಾಗದಲ್ಲಿತ್ತು. ಈಗ ಹಿಂದೂ ಕಾರ್ಯಕರ್ತರ ಹತ್ಯೆಯು ಕೊಪ್ಪಳ ಜಿಲ್ಲೆಗೂ ವಿಸ್ತರಣೆ ಆಗಿದೆ. ಇದು ಖಂಡನೀಯ ಎಂದು ತಿಳಿಸಿದರು.
ಗೃಹ ಸಚಿವರು ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ತನಿಖೆಯನ್ನು ಎನ್.ಐ.ಎಗೆ ಅಥವಾ ಸಿ.ಬಿ.ಐ.ಗೆ ಹಸ್ತಾಂತರ ಮಾಡಿ ಎಂದು ಅವರು ಒತ್ತಾಯಿಸಿದರು. ಅಲ್ಲಿನ ಪೊಲೀಸ್ ವರಿಷ್ಠಾಧಿಕಾರಿಗಳು ದಿನಕ್ಕೆ ಒಂದೊಂದು ಹೇಳಿಕೆ ಕೊಡುತ್ತಿರುವುದು ದುರಂತ ಎಂದು ಆಕ್ಷೇಪಿಸಿದರು.ಈ ವಿಷಯದಲ್ಲಿ ಸಮರ್ಪಕ ತನಿಖೆ ಆಗುವ ಹಾಗೂ ಈ ಸಾವಿಗೆ ನ್ಯಾಯ ಸಿಗುವ ಭರವಸೆ ಉಳಿದಿಲ್ಲ ಎಂದರು.
ಇವತ್ತು ಕೊಪ್ಪಳದಲ್ಲಿ ಅಖಂಡ ವಾಲ್ಮೀಕಿ ಮಹಾಸಭಾ ಮತ್ತು ಬಿಜೆಪಿ ವತಿಯಿಂದ ಹೋರಾಟ ನಡೆಯುತ್ತಿದೆ ಎಂದು ತಿಳಿಸಿದರು. ವಿಧಾನಸಭೆ ವಿಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಎಚ್.ಪಾಟೀಲ್, ಮಾಜಿ ಸಚಿವ ಹಾಗೂ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಮಾತನಾಡಿ, ಈ ಹತ್ಯಾ ಪ್ರಕರಣವನ್ನು ಎನ್ಐಎ ಅಥವಾ ಸಿಬಿಐಗೆ ಹಸ್ತಾಂತರ ಮಾಡಬೇಕು ಎಂದು ಒತ್ತಾಯಿಸಿದರು.