ಬೆಂಗಳೂರು, ಆ. 12 (DaijiworldNews/AK): ವಿಧಾನಸಭೆಯಲ್ಲಿ ಧರ್ಮಸ್ಥಳ ಪ್ರಕರಣ ಪ್ರತಿಧ್ವನಿಸಿದೆ. ಶೂನ್ಯ ವೇಳೆಯಲ್ಲಿ ಬಿಜೆಪಿ ಶಾಸಕ ಸುನೀಲ್ ಕುಮಾರ್ ಪ್ರಸ್ತಾಪಿಸಿ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡರು.

ತನಿಖೆಗೆ ನಮ್ಮ ಆಕ್ಷೇಪ ಇಲ್ಲ. ಆದರೆ ಹಿಂದೂ ಧಾರ್ಮಿಕ ಕೇಂದ್ರ ಟಾರ್ಗೆಟ್ ಮಾಡಲಾಗಿದೆ. ಅಪಪ್ರಚಾರ ನಡೆಯುತ್ತಿದೆ. ಅನಾಮಿಕ, ಐದು ಗುಂಡಿ, ಹತ್ತು ಗುಂಡಿ ಅಂತ ಹೇಳುತ್ತಾ 13 ಗುಂಡಿ ಆಗಿದೆ. ಊಹಾಪೋಹಗಳಿಗೆ ಸರ್ಕಾರ ತೆರೆ ಎಳೆಯಬೇಕು. ಧಾರ್ಮಿಕ ನಂಬಿಕೆ ಮೇಲೆ ಅಪಪ್ರಚಾರ ಮಾಡುತ್ತಿರುವವರ ಮೇಲೆ ಕ್ರಮ ಆಗಬೇಕು. ತನಿಖೆ ಎಲ್ಲಿವರೆಗೆ ಬಂದಿದೆ? ಇನ್ನೆಷ್ಟು ಗುಂಡಿ ತೆಗಿಯುತ್ತೀರಾ? ಅಂತ ಗೃಹ ಸಚಿವರು ಸ್ಪಷ್ಟನೆ ಕೊಡಬೇಕು ಅಂತಾ ಸುನೀಲ್ ಕುಮಾರ್ ಆಗ್ರಹಿಸಿದರು.
ಈ ವೇಳೆ ಉತ್ತರ ಕೊಟ್ಟ ಗೃಹ ಸಚಿವ ಪರಮೇಶ್ವರ್, ತನಿಖೆ ನಡೆಯುತ್ತಿದೆ ನಾವು ಮಧ್ಯ ಪ್ರವೇಶ ಮಾಡಲ್ಲ. ತನಿಖೆ ಒಂದು ಹಂತಕ್ಕೆ ಬಂದ ನಂತರ ವರದಿ ಕೊಡ್ತಾರೆ. ವರದಿ ಕೊಟ್ಟ ನಂತರ ನಾನು ಪೂರ್ಣ ಉತ್ತರ ಕೊಡ್ತೇನೆ ಎಂದರು. ಆದರೆ ಪರಮೇಶ್ವರ್ ಉತ್ತರಕ್ಕೆ ಬಿಜೆಪಿ ಸದಸ್ಯರು ಒಗ್ಗಟ್ಟಾಗಿ ವಿರೋಧ ವ್ಯಕ್ತಪಡಿಸಿ, ಸ್ಪಷ್ಟೀಕರಣ ಕೊಡಬೇಕು, ಇನ್ನೂ ಎಷ್ಟು ಗುಂಡಿ ಅಗೆಯುತ್ತೀರಾ ಹೇಳಿ? ಅಪಪ್ರಚಾರ ನಿಲ್ಲಿಸಿ, ಸುಳ್ಳುಪ್ರಚಾರ ಇದು, ಪ್ರಕರಣದ ಚರ್ಚೆಗೆ ಅವಕಾಶ ಕೊಡಿ ಅಂತ ಬಿಜೆಪಿ ಸದಸ್ಯರು ಒತ್ತಾಯಿಸಿದರು.
ಸದನದಲ್ಲಿ ಮತ್ತೆ ಗದ್ದಲ ಹೆಚ್ಚಾಯಿತು. ಈ ಮಧ್ಯಪ್ರವೇಶ ಮಾಡಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ನಾವು ಯಾರ ಪರವೂ ಇಲ್ಲ, ನಾವು ಸತ್ಯದ ಪರ ಎಂದರು. ನಿಯಮ 69ರಡಿ ಚರ್ಚೆಗೆ ಅವಕಾಶ ನೀಡುವಂತೆ ಬಿಜೆಪಿ ಮನವಿ ಮಾಡಿದರು.