ಬೆಂಗಳೂರು, ಆ. 14 (DaijiworldNews/TA): ದಕ್ಷಿಣ ಕನ್ನಡ ಜಿಲ್ಲೆಗೆ ʼಮಂಗಳೂರುʼ ಎಂದು ಮರು ನಾಮಕರಣ ಮಾಡುವ ಸಂಬಂಧ ಪರ, ವಿರೋಧ ಮನವಿಗಳು ಸ್ವೀಕೃತವಾಗಿವೆ. ಜಿಲ್ಲಾಧಿಕಾರಿಯಿಂದ ವರದಿ ಬರುವುದು ಬಾಕಿಯಿದೆ. ಎಲ್ಲರ ಅಭಿಪ್ರಾಯ ಪಡೆದು ಸರಕಾರ ಮುಂದಿನ ತೀರ್ಮಾನ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಬುಧವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಹರೀಶ್ ಪೂಂಜ ಹಾಗೂ ವೇದವ್ಯಾಸ ಕಾಮತ್, ಡಾ.ವೈ ಭರತ್ ಶೆಟ್ಟಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಎಂದು ಮರು ನಾಮಕರಣ ಮಾಡುವ ಬಗ್ಗೆ ಗಮನ ಸೆಳೆದ ಸೂಚನೆಗೆ ಅವರು ಉತ್ತರಿಸಿದರು.
ದಕ್ಷಿಣ ಕನ್ನಡ ಭಾಗವನ್ನು 17ನೇ ಶತಮಾನದಲ್ಲೆ ಕ್ಯಾನರೀಸ್ ಎಂದು ಕರೆಯುತ್ತಿದ್ದರು. ಕ್ಯಾನರೀಸ್ ಎಂದರೆ ಕನ್ನಡ ನಾಡು ಎಂದರ್ಥ. ಕನ್ನಡದ ಮೊದಲ ಸಾಮ್ರಾಜ್ಯ ಬನವಾಸಿ ಕಂದಬರದ್ದು. ಈಗ ಅದು ಉತ್ತರ ಕನ್ನಡ ಜಿಲ್ಲೆ. ಕನ್ನಡ ಅನ್ನೊ ಪದಕ್ಕೂ ನಮಗೆ ಬಾಂಧವ್ಯವಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮರು ನಾಮಕರಣಕ್ಕೆ ಸರಕಾರ ಮುಕ್ತ ಮನಸ್ಸು ಹೊಂದಿದೆ. ಪರ, ವಿರೋಧ ಎರಡು ಅಭಿಪ್ರಾಯಗಳು ಇರುವುದರಿಂದ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆಯೋಣ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.