ಬೆಂಗಳೂರು, ಆ. 15 (DaijiworldNews/TA): ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಪವಿತ್ರಾ ಗೌಡ ಜಾಮೀನು ರದ್ದುಗೊಳಿಸಿರುವ ಸುಪ್ರೀಂಕೋರ್ಟ್ ತೀರ್ಪಿನ ಬೆನ್ನಲ್ಲೇ, ಬೆಂಗಳೂರು ಪೊಲೀಸರು ಪವಿತ್ರಾ ಅವರನ್ನು ಅವರ ನಿವಾಸದಲ್ಲಿ ಬಂಧಿಸಿದ್ದಾರೆ. ದರ್ಶನ್ ಸೇರಿದಂತೆ 7 ಮಂದಿ ಆರೋಪಿಗಳ ಜಾಮೀನು ರದ್ದುಪಡಿಸಿದ ಬಳಿಕ, ಎಲ್ಲಾ ಆರೋಪಿಗಳನ್ನು ಪುನಃ ವಶಕ್ಕೆ ಪಡೆಯುವ ಕಾರ್ಯಾಚರಣೆ ಪ್ರಾರಂಭವಾಗಿದೆ.

ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಗೆ ಸ್ಪಂದನೆ ನೀಡಿದ ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿಗಳು ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ನೇತೃತ್ವದ ದ್ವಿಸದಸ್ಯ ಪೀಠ, ಹೈಕೋರ್ಟ್ ಜಾಮೀನು ಆದೇಶವನ್ನು "ವಿಕೃತ" ಹಾಗೂ "ಅಧಿಕಾರದ ಯಾಂತ್ರಿಕ ಪ್ರಯೋಗ" ಎಂದು ಹೇಳಿದ್ದಾರೆ. "ಕಾನೂನು ಎಲ್ಲರಿಗೂ ಒಂದೇ. ಯಾರೊಬ್ಬರೂ ಕಾನೂನಿಗಿಂತ ಮೇಲಲ್ಲ" ಎಂದು ನ್ಯಾಯಮೂರ್ತಿ ಪಾರ್ದಿವಾಲಾ ತೀವ್ರವಾಗಿ ಸೂಚಿಸಿದರು. ಈ ತೀರ್ಪು, ಪ್ರಸಿದ್ಧ ವ್ಯಕ್ತಿಗಳಿಗೂ ವಿಶಿಷ್ಟ ಸವಲತ್ತು ಇಲ್ಲ ಎಂಬ ಸ್ಪಷ್ಟ ಸಂದೇಶವನ್ನು ದೇಶದಾದ್ಯಾಂತ ನೀಡಿದೆ.
ತೀರ್ಪು ಪ್ರಕಟದ ಮುನ್ನ ಪವಿತ್ರಾ ಗೌಡ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ, “ಗೆಲವು ನಿಧಾನವಾಗಬಹುದು, ಆದರೆ ದೇವರ ರಕ್ಷಣೆ ಇರುತ್ತದೆ. ನಾನು ತಾಳ್ಮೆ ಮತ್ತು ನಂಬಿಕೆಯನ್ನು ಆಯ್ಕೆ ಮಾಡುತ್ತೇನೆ,” ಎಂದು ಬರೆದಿದ್ದರು. ಆದರೆ ಸುಪ್ರೀಂಕೋರ್ಟ್ ತೀರ್ಪು ಪ್ರಕಟವಾದ ಕೆಲವೇ ಸಮಯದಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದಾರೆ.