ಕೋಝಿಕ್ಕೋಡ್, ಆ. 16 (DaijiworldNews/TA): ಎರಡು ದಿನಗಳ ಹಿಂದೆ ನಗರದ ವೈದ್ಯಕೀಯ ಕಾಲೇಜಿನಲ್ಲಿ ಸಾವನ್ನಪ್ಪಿದ ಒಂಬತ್ತು ವರ್ಷದ ಬಾಲಕಿ ಅಮೀಬಿಕ್ ಎನ್ಸೆಫಾಲಿಟಿಸ್ನಿಂದ ಬಳಲುತ್ತಿದ್ದಳು, ಇದು ಕಲುಷಿತ ನೀರಿನಲ್ಲಿ ಸ್ವತಂತ್ರವಾಗಿ ವಾಸಿಸುವ ಅಮೀಬಾದಿಂದ ಉಂಟಾಗುವ ಅಪರೂಪದ ಮೆದುಳಿನ ಸೋಂಕು ಎಂದು ಉತ್ತರ ಕೇರಳ ಜಿಲ್ಲೆಯ ಆರೋಗ್ಯ ಅಧಿಕಾರಿಗಳು ಶನಿವಾರ ದೃಢಪಡಿಸಿದ್ದಾರೆ.

ಆಗಸ್ಟ್ 13 ರಂದು ಜ್ವರದಿಂದಾಗಿ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಆಕೆಯ ಸ್ಥಿತಿ ಶೀಘ್ರವಾಗಿ ಹದಗೆಟ್ಟ ಕಾರಣ, ಆಗಸ್ಟ್ 14 ರಂದು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಯಿತು, ಅಲ್ಲಿ ಆಕೆ ಅದೇ ದಿನ ನಿಧನಳಾಗಿದ್ಧಾಳೆ ಎಂದು ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶುಕ್ರವಾರ ತಡರಾತ್ರಿ ವೈದ್ಯಕೀಯ ಕಾಲೇಜಿನ ಸೂಕ್ಷ್ಮ ಜೀವವಿಜ್ಞಾನ ಪ್ರಯೋಗಾಲಯದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಬಾಲಕಿಯ ಸಾವಿಗೆ ಅಮೀಬಿಕ್ ಎನ್ಸೆಫಾಲಿಟಿಸ್ ಕಾರಣ ಎಂದು ತಿಳಿದುಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ವರ್ಷ ಜಿಲ್ಲೆಯಲ್ಲಿ ವರದಿಯಾದ ಅಪರೂಪದ ಮೆದುಳು ಸೋಂಕಿನ ನಾಲ್ಕನೇ ಪ್ರಕರಣ ಇದಾಗಿರಬಹುದು ಎಂದು ಅಧಿಕಾರಿ ತಿಳಿಸಿದ್ದಾರೆ. ಸ್ವತಂತ್ರವಾಗಿ ಬದುಕುವ ಅಮೀಬಾದಿಂದ ಉಂಟಾಗುವ ಅಮೀಬಿಕ್ ಎನ್ಸೆಫಾಲಿಟಿಸ್ ಒಂದು ಮಾರಕ ಸೋಂಕಾಗಿದ್ದು, ಇದು ಸಾಮಾನ್ಯವಾಗಿ ಸರೋವರಗಳು, ನದಿಗಳು ಮತ್ತು ತೊರೆಗಳಂತಹ ಸಿಹಿನೀರಿನ ಮೂಲಗಳಿಂದ ಸೋಂಕಿಗೆ ಒಳಗಾಗುತ್ತದೆ.