ನವದೆಹಲಿ, ಆ. 16 (DaijiworldNews/AA): ಚುನಾವಣಾ ಇತಿಹಾಸದಲ್ಲೇ ಅಪರೂಪದ ವಿದ್ಯಮಾನವೊಂದರಲ್ಲಿ, ಮೊಟ್ಟ ಮೊದಲ ಬಾರಿಗೆ ಇವಿಎಂ ಯಂತ್ರಗಳನ್ನು ತರಿಸಿಕೊಂಡ ಸುಪ್ರೀಂ ಕೋರ್ಟ್, ತನ್ನ ಆವರಣದೊಳಗೆಯೇ ರಿಜಿಸ್ಟ್ರಾರ್ ಮೂಲಕ ಮರು ಮತಎಣಿಕೆ ನಡೆಸಿ, ಹರಿಯಾಣದ ಗ್ರಾಮ ಪಂಚಾಯತ್ ಒಂದರ 'ಸರ್ಪಂಚ್' ಚುನಾವಣೆಯ ಫಲಿತಾಂಶವನ್ನೇ ಬದಲಿಸಿದೆ.

ಹರಿಯಾಣದ ಪಾಣಿಪತ್ ಜಿಲ್ಲೆಯ ಬುವಾನಾ ಲಖು ಗ್ರಾಮ ಪಂಚಾಯಿತಿಗೆ 2022ರ ನವೆಂಬರ್ 2ರಂದು ನಡೆದ ಚುನಾವಣೆಯಲ್ಲಿ ಕುಲದೀಪ್ ಸಿಂಗ್ ಅವರು ಮೋಹಿತ್ ಕುಮಾರ್ ವಿರುದ್ಧ ಗೆಲುವು ಸಾಧಿಸಿದ್ದರು. ಈ ಫಲಿತಾಂಶವನ್ನು ಒಪ್ಪದ ಮೋಹಿತ್ ಕುಮಾರ್, ಸ್ಥಳೀಯ ಚುನಾವಣಾ ನ್ಯಾಯಮಂಡಳಿಯ ಮೆಟ್ಟಿಲೇರಿದ್ದರು.
ಮರು ಮತ ಎಣಿಕೆಯಲ್ಲಿ ಚುನಾವಣೆಯಲ್ಲಿ ಸೋತಿದ್ದರು ಎನ್ನಲಾಗಿದ್ದ ಅಭ್ಯರ್ಥಿ 51 ಹೆಚ್ಚು ಮತಗಳನ್ನು ಪಡೆದಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್, ಚುನಾವಣಾ ನ್ಯಾಯಮಂಡಳಿಯ ಅಂತಿಮ ತೀರ್ಪಿಗೆ ಒಳಪಟ್ಟು, ಪಾಣಿಪತ್ನ ಉಪ ಆಯುಕ್ತ ಹಾಗೂ ಚುನಾವಣಾ ಅಧಿಕಾರಿಗೆ ಸೋತ ಅಭ್ಯರ್ಥಿ (ಅರ್ಜಿದಾರ)ಯನ್ನು ಗ್ರಾಮ ಪಂಚಾಯತ್ನ ಚುನಾಯಿತ 'ಸರ್ಪಂಚ್' ಎಂದು ಘೋಷಿಸುವ ಅಧಿಸೂಚನೆಯನ್ನು 2 ದಿನಗಳಲ್ಲಿ ಹೊರಡಿಸಬೇಕು ಎಂದು ಕೋರ್ಟ್ ಸೂಚಿಸಿದೆ.
ಅರ್ಜಿದಾರರು ಸದರಿ ಹುದ್ದೆಯನ್ನು ತಕ್ಷಣವೇ ವಹಿಸಿಕೊಳ್ಳಲು ಮತ್ತು ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಅರ್ಹರಾಗಿರುತ್ತಾರೆ ಎಂದು ಕೋರ್ಟ್ ತಿಳಿಸಿದೆ.
ಇನ್ನು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ದೀಪಂಕರ್ ದತ್ತ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರ ಪೀಠ ನಡೆಸಿದೆ. "ಈ ನ್ಯಾಯಾಲಯದ ರಿಜಿಸ್ಟ್ರಾರ್ (ಒಎಸ್ಡಿ) ಸಲ್ಲಿಸಿದ ವರದಿಯನ್ನು ಪ್ರಾಥಮಿಕವಾಗಿ ಅನುಮಾನಿಸಲು ಯಾವುದೇ ಕಾರಣಗಳಿಲ್ಲ. ವಿಶೇಷವಾಗಿ ಸಂಪೂರ್ಣ ಮರುಎಣಿಕೆಯನ್ನು ಸರಿಯಾಗಿ ವಿಡಿಯೋ ರೆಕಾರ್ಡ್ ಮಾಡಲಾಗಿದೆ ಮತ್ತು ಅದರ ಫಲಿತಾಂಶಕ್ಕೆ ಪಕ್ಷಗಳ ಪ್ರತಿನಿಧಿಗಳು ಸಹಿ ಮಾಡಿದ್ದಾರೆ. ಮೇಲ್ಮನವಿದಾರರು 22.11.2022ರಂದು ನಡೆದ ಚುನಾವಣೆಯಲ್ಲಿ ಹರಿಯಾಣದ ಪಾಣಿಪತ್ ಜಿಲ್ಲೆಯ ಬುವಾನಾ ಲಖು ಗ್ರಾಮ ಪಂಚಾಯತ್ನ ಚುನಾಯಿತ ಸರ್ಪಂಚ್ ಎಂದು ಘೋಷಿಸಲು ಅರ್ಹರು ಎಂದು ನಾವು ತೃಪ್ತರಾಗಿದ್ದೇವೆ" ಎಂದು ಪೀಠ ಆದೇಶ ಹೊರಡಿಸಿದೆ.
ಇದರಿಂದ ಬೇಸರಗೊಂಡ ಕುಲದೀಪ್ ಸಿಂಗ್ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಕುಲದೀಪ್ ಸಿಂಗ್ ಪರವಾಗಿ ತೀರ್ಪು ನೀಡಿತ್ತು. ಅಭ್ಯರ್ಥಿಯೊಬ್ಬರು ಆಯ್ಕೆಯಾದ ನಂತರ, ಮತಗಳ ಮರು ಎಣಿಕೆಯ ಮೂಲಕ ಫಲಿತಾಂಶವನ್ನು ಸ್ವಯಂಪ್ರೇರಿತವಾಗಿ ಬದಲಾಯಿಸಲು ಸಾಧ್ಯವಿಲ್ಲ. ನೊಂದ ಪಕ್ಷಕ್ಕೆ ಲಭ್ಯವಿರುವ ಸೂಕ್ತ ಪರಿಹಾರವೆಂದರೆ ಚುನಾವಣಾ ತಕರಾರು ಅರ್ಜಿಯನ್ನು ಸಲ್ಲಿಸುವುದು ಎಂದು ಹೈಕೋರ್ಟ್ ಹೇಳಿತ್ತು. ಈ ದೃಷ್ಟಿಕೋನದಿಂದ, ಹೈಕೋರ್ಟ್ ಮೋಹಿತ್ ಕುಮಾರ್ ಅವರ ಆಯ್ಕೆಯನ್ನು ರದ್ದುಗೊಳಿಸಿ, ಕುಲದೀಪ್ ಸಿಂಗ್ ಅವರನ್ನು ಚುನಾಯಿತ 'ಸರ್ಪಂಚ್' ಎಂದು ಘೋಷಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿತ್ತು.