ಹಾಸನ, ಆ. 16 (DaijiworldNews/AA): ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭೂಕುಸಿತ ಉಂಟಾಗಿದೆ. ಭೂಕುಸಿತ ಹಿನ್ನೆಲೆ ಶಿರಾಡಿಘಾಟ್ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದ್ದು, ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸಕಲೇಶಪುರ ತಾಲೂಕಿನ, ಮಾರನಹಳ್ಳಿ ಬಳಿ ಹಲವೆಡೆ ಭೂಕುಸಿತ ಉಂಟಾಗಿದೆ. ಮರ, ಗಿಡಗಳ ಸಮೇತ ಮಣ್ಣು ರಸ್ತೆಗೆ ಕುಸಿಯುತ್ತಿದೆ. ವೀಕೆಂಡ್ ಹಿನ್ನೆಲೆಯಲ್ಲಿ ವಾಹನಗಳ ಸಂಚಾರ ಹೆಚ್ಚಿದ್ದು, ಶಿರಾಡಿ ಘಾಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಭೂಕುಸಿತ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ 75 ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ. ಈ ಹಿನ್ನೆಲೆ ನೂರಾರು ವಾಹನಗಳು ರಸ್ತೆ ಮಧ್ಯೆ ನಿಂತಿದೆ. ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಟ್ರಾಫಿಕ್ ಜಾಮ್ ತೆರವುಗೊಳಿಸಲು ಪೊಲೀಸರಿಗೆ ಸವಾಲಾಗಿದೆ. ಮಾರನಹಳ್ಳಿ ಬಳಿ ಪೊಲೀಸರು ಬ್ಯಾರಿಕೇಡ್ ಹಾಕಿ ಬದಲಿ ರಸ್ತೆಯಲ್ಲಿ ಸಂಚರಿಸುವಂತೆ ಸೂಚನೆ ನೀಡಿದ್ದಾರೆ.