ಕೋಲ್ಕತಾ,ಜೂ.26(DaijiworldNews/AZM): ಕಾಂಗ್ರೆಸ್, ಸಿಪಿಎಂ ಹಾಗೂ ಟಿಎಂಸಿ ಪಕ್ಷಗಳು ಬಿಜೆಪಿಯನ್ನು ಸೋಲಿಸಲು ಒಗ್ಗೂಡಬೇಕೆಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿವರು ಇಂದು ಹೇಳಿದ್ದಾರೆ.
ರಾಜ್ಯ ವಿಧಾನಸಭಾ ಕಲಾಪದ ವೇಳೆ ಈ ಕುರಿತು ಮಾತನಾಡಿದ ಮಮತಾ, ಬಿಜೆಪಿಗೆ ಮತ ನೀಡಿದಲ್ಲಿ ಏನೇನಾಗುತ್ತದೆ ಎಂಬುದನ್ನು ಉತ್ತರ 24 ಪರಗಣ ಜಿಲ್ಲೆಯ ಭಟ್ಪಾರಾ ನಗರದ ಜನತೆ ಕಾಣುತ್ತಿದ್ದಾರೆ ಎಂದರು.
'' ಬಿಜೆಪಿ ವಿರುದ್ಧ ಹೋರಾಡಲು ನಾವೆಲ್ಲರೂ ಒಗ್ಗೂಡಬೇಕೆಂದು ನಾನು ಭಾವಿಸುತ್ತೇನೆ. ಇದಕ್ಕಾಗಿ ನಾವು ರಾಜಕೀಯವಾಗಿ ಕೈಜೋಡಿಸಬೇಕೆಂದು ಅರ್ಥವಲ್ಲ. ಆದರೆ ರಾಷ್ಟ್ರೀಯ ಮಟ್ಟದ ಸಾಮಾನ್ಯ ವಿಷಯಗಳ ವಿಚಾರವಾಗಿ ನಾವು ಒಟ್ಟಾಗಬಹುದಾಗಿದೆ'' ಎಂದವರು ಹೇಳಿದ್ದಾರೆ.
ಸದನದಲ್ಲಿ ಬಿಜೆಪಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಮಮತಾ ಅವರು ಬಿಜೆಪಿಯು ಪಶ್ಚಿಮ ಬಂಗಾಳದಲ್ಲಿ ಅಪರಿಚಿತವಾದ ಸಂಸ್ಕೃತಿಯೊಂದನ್ನು ತರಲು ಪ್ರಯತ್ನಿಸುತ್ತಿರುವುದಾಗಿ ಆರೋಪಿಸಿದರು. ದೀರ್ಘ ಸಮಯದಿಂದ ಟಿಎಂಸಿಯ ಭದ್ರಕೋಟೆಯಾಗಿರುವ ಭಟ್ಪಾರಾದಲ್ಲಿ ಲೋಕಸಭಾ ಚುನಾವಣೆಯ ಬಳಿಕ ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ನಡುವೆ ಆಗಾಗ್ಗೆ ಘರ್ಷಣೆಗಳು ನಡೆಯುತ್ತಿವೆ.