ಬೆಂಗಳೂರು, ಆ. 17 (DaijiworldNews/AA): ದೇಶದ ಯುವಕರಿಗೆ ಹದಿನೆಂಟನೇ ವರ್ಷಕ್ಕೆ ಮತದಾನದ ಹಕ್ಕು ನೀಡಿದ್ದು, ತಂತ್ರಜ್ಞಾನ ಕ್ರಾಂತಿ ಮಾಡಿದ್ದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ಬೆಂಗಳೂರಿನ ಕಂಠೀರವ ಸ್ಟೇಡಿಯಂ ಬಳಿ ಭಾನುವಾರ ಏರ್ಪಡಿಸಿದ್ದ 'ರನ್ ಫಾರ್ ರಾಜೀವ್' ಮ್ಯಾರಥಾನ್ಗೆ ಚಾಲನೆ ನೀಡಿ ಮಾತನಾಡಿದ ಅವರು, "ನಾನು ಕೂಡ ಚಿಕ್ಕ ವಯಸ್ಸಿನಲ್ಲಿ 10 ರಿಂದ 15 ಕಿ.ಮೀ. ಓಡುತ್ತಿದ್ದೆ. ಇದೇ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ರಾಜೀವ್ ಗಾಂಧಿ ಅವರ ನೆನಪಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ನಮ್ಮ ದೇಶದ ಯುವಕರಿಗೆ 21 ವರ್ಷಕ್ಕೆ ಮತದಾನದ ಹಕ್ಕು ನೀಡಲಾಗಿತ್ತು. ಅದನ್ನು 18 ವರ್ಷಕ್ಕೆ ಇಳಿಸಿದ್ದು ರಾಜೀವ್ ಗಾಂಧಿ ಅವರು. ಈ ನಿರ್ಧಾರವನ್ನು ವಿರೋಧ ಪಕ್ಷಗಳು ಟೀಕೆ ಮಾಡಿದ್ದವು" ಎಂದು ಹೇಳಿದರು.
"ರಾಜೀವ್ ಗಾಂಧಿ ಅವರು ನಾವು 16ನೇ ವಯಸ್ಸಿಗೆ ಎಸ್ಎಸ್ಎಲ್ಸಿ ಪಾಸಾದ ಯುವಕರನ್ನು ದೇಶದ ಗಡಿ ಕಾಯಲು ಸೇನೆಗೆ ನೇಮಿಸುತ್ತೇವೆ. ಅದೇ ರೀತಿ ಪ್ರಜಾಪ್ರಭುತ್ವ ಕಾಯಲು ಅವರಿಗೆ ಮತದಾನದ ಹಕ್ಕು ನೀಡಲಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಂಚಾಯ್ತಿಯಿಂದ ಪಾರ್ಲಿಮೆಂಟ್ವರೆಗೂ ಜನಪ್ರತಿನಿಧಿಗಳು ಆಯ್ಕೆ ಆಗಬೇಕೆಂದು ಹೇಳಿದರು" ಎಂದು ನುಡಿದರು.
"ನಾನು ವಿದ್ಯಾರ್ಥಿಯಾಗಿದ್ದಾಗ ಎನ್ಎಸ್ಯುಐ ನಾಯಕನಾಗಿದ್ದೆ. ಆಗ ನಮ್ಮ ಬಳಿ ಫೋನ್ ಇರಲಿಲ್ಲ. ಲ್ಯಾಂಡ್ ಲೈನ್ ಸಂಪರ್ಕ ಪಡೆಯಲು 3 ರಿಂದ 4 ವರ್ಷ ಕಾಯಬೇಕಿತ್ತು. ತಂತ್ರಜ್ಞಾನ ಕ್ರಾಂತಿ ಮೂಲಕ ಇಂದು ನಿಮ್ಮೆಲ್ಲರ ಕೈಗೆ ಮೊಬೈಲ್ ಬರುವಂತೆ ಮಾಡಿರುವುದೇ ರಾಜೀವ್ ಗಾಂಧಿ. ದೇಶದ ಐಕ್ಯತೆ, ಸಮಗ್ರತೆ, ಶಾಂತಿಗಾಗಿ ಪ್ರಾಣವನ್ನೇ ತ್ಯಾಗ ಮಾಡಿದ ಧೀಮಂತ ನಾಯಕರ ನೆನಪಲ್ಲಿ ನೀವು ಹೆಜ್ಜೆ ಹಾಕಲು ಬಂದಿದ್ದೀರಿ. ನಿಮಗೆ ಅಭಿನಂದನೆಗಳು" ಎಂದರು.