ಬೆಂಗಳೂರು, ಆ. 18 (DaijiworldNews/AA): ಸ್ಯಾಂಡಲ್ವುಡ್ ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್ ಹಾಕಿದ್ದವರ ಪೈಕಿ ಸಿಸಿಬಿ ಪೊಲೀಸರು ಮತ್ತೆ ಇಬ್ಬರನ್ನು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.

ಉಡುಪಿ ಮೂಲದವರಾದ ಸುಜನ್ ಮತ್ತು ಆದರ್ಶ್ ಬಂಧಿತರು. ಇದಕ್ಕೂ ಮುನ್ನ ಸಿಸಿಬಿ ಪೊಲೀಸರು ಮಂಜುನಾಥ, ಭುವನ್ ಗೌಡ, ಪವನ್, ಓಬಣ್ಣ ಮತ್ತು ಗಂಗಾಧರ್ ಸೇರಿ ಒಟ್ಟು 9 ಯುವಕರನ್ನು ಬಂಧಿಸಿದ್ದರು.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ರೇಣುಕಾಸ್ವಾಮಿ ಕುಟುಂಬದ ಪರವಾಗಿ ನಿಂತ ಕಾರಣಕ್ಕೆ ನಟಿ ರಮ್ಯಾಗೆ ದರ್ಶನ್ ಅಭಿಮಾನಿಗಳು ಅಶ್ಲೀಲ ಮೆಸೇಜ್ ಕಳುಹಿಸಿದ್ದರು. ಇದರ ಬೆನ್ನಲ್ಲೇ ಅಶ್ಲೀಲ ಮೆಸೇಜ್ ಕಳುಹಿಸಿದ್ದ 43 ಅಕೌಂಟ್ಗಳ ವಿರುದ್ಧ ನಟಿ ರಮ್ಯಾ ದೂರು ದಾಖಲಿಸಿದ್ದರು. ದೂರು ದಾಖಲಾದ ಬೆನ್ನಲ್ಲೇ ಆರೋಪಿಗಳ ಪತ್ತೆಗಾಗಿ 6 ತಂಡವನ್ನ ರಚಿಸಲಾಗಿತ್ತು.
ಕೊಲೆಯಾದ ಚಿತ್ರದುರ್ಗದ ರೇಣುಕಾಸ್ವಾಮಿಗೆ ನ್ಯಾಯ ಸಿಗುವ ಬಗ್ಗೆ ರಮ್ಯಾ ಪೋಸ್ಟ್ ಹಾಕಿದ್ದಕ್ಕೆ ಅಶ್ಲೀಲ ಕಾಮೆಂಟ್ ಮಾಡಿರುವುದು ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಬೆಂಗಳೂರು ಸೇರಿದಂತೆ ಹಲವೆಡೆ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.