ಬೆಂಗಳೂರು, ಆ. 18 (DaijiworldNews/AK): ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ನಿರಂತರ ಅಪಪ್ರಚಾರದ ಹಿಂದೆ ಯಾರಿದ್ದಾರೆ? ಯಾರ ಷಡ್ಯಂತ್ರ ಇದರ ಹಿಂದಿದೆ ಎಂಬುದು ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ ವಿಜಯೇಂದ್ರ ಹೇಳಿದರು.

ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ನಿರಂತರ ಅಪಪ್ರಚಾರದ ಹಿಂದೆ ಯಾರಿದ್ದಾರೆ? ಯಾರ ಷಡ್ಯಂತ್ರ ಇದರ ಹಿಂದಿದೆ ಎಂಬುದು ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ ಎಂದು ವಿಜಯೇಂದ್ರ ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ವಿಷಯದಲ್ಲಿ ಅಪಪ್ರಚಾರ, ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೆಲಸ ಆಗಿದ್ದು, ರಾಜ್ಯ ಸರಕಾರಕ್ಕೆ ಧರ್ಮಸ್ಥಳ- ಶ್ರೀ ಮಂಜುನಾಥೇಶ್ವರನ ಬಗ್ಗೆ ಕಿಂಚಿತ್ತಾದರೂ ನಂಬಿಕೆ ಇದ್ದರೆ, ಆ ಶಕ್ತಿಗಳ ಕುರಿತು ಸರಕಾರ ತನಿಖೆ ನಡೆಸಬೇಕಿದೆ ಎಂದು ಒತ್ತಾಯಿಸಿದರು.
ಇದೇ ವೇಳೆ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಗಳು ಒಳ ಮೀಸಲಾತಿ ವಿಚಾರದಲ್ಲಿ ದೃಢ ನಿರ್ಧಾರ ತೆಗೆದುಕೊಳ್ಳಬೇಕು. ಎಸ್ಸಿ ಸಮುದಾಯದ 101 ಜಾತಿಗಳಿದ್ದು, ಯಾವುದೇ ಜಾತಿಗೆ ಅನ್ಯಾಯ ಆಗದಂತೆ ನಿರ್ಣಯ ತೆಗೆದುಕೊಳ್ಳಬೇಕು. ನೀವು ತೆಗೆದುಕೊಳ್ಳುವ ತೀರ್ಮಾನದಿಂದ ನಾಳೆ ಇತರ ಜಾತಿಗಳು, ಎಸ್ಸಿ ಸಮುದಾಯದವರು ಬೀದಿಗಿಳಿದು ಹೋರಾಟ ಮಾಡದಂತೆ ನೋಡಿಕೊಳ್ಳಿ ಎಂದು ತಿಳಿಸಿದರು.
ಎಲ್ಲ ವಿಷಯಗಳನ್ನೂ ವಿಮರ್ಶಿಸಿ, ಸಮರ್ಪಕ ತೀರ್ಮಾನವನ್ನು ರಾಜ್ಯದ ಮುಖ್ಯಮಂತ್ರಿಗಳು ತೆಗೆದುಕೊಳ್ಳಬೇಕು ಎಂದು ವಿನಂತಿಸಿದರು. ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲ ಗೊಂದಲಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕಾರಣಕರ್ತರು. ಗೊಂದಲಗಳು, ಸಮಸ್ಯೆಗೆ ಇತಿಶ್ರೀ ಹಾಡುವ ಕರ್ತವ್ಯ ಈ ರಾಜ್ಯದ ಮುಖ್ಯಮಂತ್ರಿಗಳಿಗೆ ಇದೆ. ಅದನ್ನು ಸರಿಯಾದ ರೀತಿಯಲ್ಲಿ ನಿಭಾಯಿಸುತ್ತಾರೆ ಎಂಬ ಅಪೇಕ್ಷೆಯಲ್ಲಿ ನಮ್ಮ ಎಸ್ಸಿ ಸಮುದಾಯ ಇದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದಾಗಿನಿಂದ ಒಳ ಮೀಸಲಾತಿ ವಿಷಯದಲ್ಲಿ ಯಾವುದೇ ಒಂದು ತೀರ್ಮಾನ ತೆಗೆದುಕೊಳ್ಳಲು ಆಗಿಲ್ಲ. ಸರಕಾರವು ಗೊಂದಲದಲ್ಲಿ ಇರುವುದನ್ನು ನಾವು ನೋಡಿದ್ದೇವೆ ಎಂದು ಟೀಕಿಸಿದರು.