ಬೆಂಗಳೂರು, ಆ. 20 (DaijiworldNews/AK): ಒಳ ಮೀಸಲಾತಿ ಸಂಬಂಧ ರಾಜ್ಯದ ಕಾಂಗ್ರೆಸ್ ಸರಕಾರವು ಕೇವಲ ರಾಜಕೀಯ ತೀರ್ಮಾನ ವ್ಯಕ್ತಪಡಿಸಿದೆ ಎಂಬುದಾಗಿ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಂಥ ತೀರ್ಮಾನವನ್ನು ಸರಕಾರವು ಯಾವತ್ತೋ ಕೊಡಬಹುದಾಗಿತ್ತು. ಇಷ್ಟು ಕಾಯಬೇಕಿರಲಿಲ್ಲ ಎಂದು ಅವರು ಟೀಕಿಸಿದರು. ಸರಕಾರ ಸಾಮಾಜಿಕ ನ್ಯಾಯದ ಪರವಾಗಿ ಇದೆಯೇ ಎಂಬುದು ರಾಜ್ಯದ ಜನರಿಗೆ ಪ್ರಶ್ನಾರ್ಥಕ ಚಿಹ್ನೆಯಾಗಿದೆ ಎಂದು ವಿಶ್ಲೇಷಿಸಿದರು.
ರಾಜ್ಯದ ಕಾಂಗ್ರೆಸ್ ಸರಕಾರವು ಒಳ ಮೀಸಲಾತಿ ವಿಷಯದಲ್ಲಿ ಒಂದು ತೀರ್ಮಾನಕ್ಕೆ ಬಂದ ವಿಚಾರ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಈ ತೀರ್ಮಾನವು ಸುಪ್ರೀಂ ಕೋರ್ಟ್ ಆದೇಶದ ಪರವಾಗಿ ಅಥವಾ ಸದಾಶಿವ ಆಯೋಗದ ಪರವಾಗಿಯೂ ಇಲ್ಲ. ನಾಗಮೋಹನ್ ದಾಸ್ ಆಯೋಗದ ವಿಚಾರಗಳೂ ಇದರಲ್ಲಿ ಇಲ್ಲ ಎಂದು ಆಕ್ಷೇಪಿಸಿದರು.
ನ್ಯಾ.ನಾಗಮೋಹನ್ ದಾಸ್ ಅವರು 5 ಗುಂಪುಗಳಾಗಿ ವಿಂಗಡಿಸಿದ್ದರು. ನೀವು ಅದನ್ನು ತಿರಸ್ಕಾರ ಮಾಡಿ, 3 ಗುಂಪಾಗಿ ಸೀಮಿತಗೊಳಿಸಿದ್ದೀರಿ. ಎಡ, ಬಲ ಮತ್ತು ಸ್ಪಶ್ಯ ಸಮುದಾಯವಾಗಿ ಮಾಡಿದ ಮಾಹಿತಿ ಇದೆ. ಹಾಗಾದಲ್ಲಿ ಅಲೆಮಾರಿ ಸಮುದಾಯಗಳು, ಮೂಲ ಜಾತಿಗಳೇ ಇಲ್ಲದವರಿಗೆ ಯಾವ ನ್ಯಾಯವನ್ನು ನೀವು ಕೊಡುತ್ತೀರಿ ಎಂದು ಕೇಳಿದರು.
ನಮ್ಮ ಸರಕಾರವು ಮೀಸಲಾತಿ ಪ್ರಮಾಣ ಹೆಚ್ಚಿಸಿ 4 ಗುಂಪಾಗಿ ವಿಂಗಡಿಸಿ ಕೊಟ್ಟ ಒಳ ಮೀಸಲಾತಿಯನ್ನು ನೀವು ಲೇವಡಿ ಮಾಡಿದ್ದೀರಿ. ಜೊತೆಗೆ ಗೊಂದಲ ಸೃಷ್ಟಿ ಮಾಡಿದ್ದೀರಿ. ಆಗ ಮತಬ್ಯಾಂಕಿಗಾಗಿ ಜಾತಿ ಜಾತಿಗಳನ್ನು ವಿಂಗಡಿಸಿ ನೀವು ಪ್ರಯೋಜನ ಪಡೆದುಕೊಂಡಿದ್ದೀರಿ ಎಂದು ಆಕ್ಷೇಪಿಸಿದರು.