ಬೆಂಗಳೂರು, ಆ. 22 (DaijiworldNews/AK): ರಾಜ್ಯಕ್ಕೆ ಒಂದೇ ಕಾನೂನು ಇರಬೇಕು. ಗಣೇಶೋತ್ಸವವನ್ನು ವಿಜೃಂಭಣೆಯಿಂದ ಹಿಂದೂಗಳು ಕೊಂಡಾಡುವಂತೆ ಆಚರಿಸಲು ಸರಕಾರ ಅವಕಾಶ ಮಾಡಿಕೊಡಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೇರೆ ಬೇರೆಯವರಿಗೆ ಬೇರೆ ಬೇರೆ ರೀತಿ ಮಣೆ ಹಾಕುವುದು, ಹಿಂದೂಗಳನ್ನು ದಮನಿಸುವ ನೀತಿಯನ್ನು ಮಾಡಿದ್ದೇ ಆದರೆ, ಇದರ ಪ್ರತಿಫಲವನ್ನು ನೀವೇ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಎಲ್ಲ ಕಡೆ ಹಿಂದೂಗಳು ವಿಜೃಂಭಣೆಯಿಂದ ಗಣೇಶೋತ್ಸವವನ್ನು ಆಚರಿಸಲು ಅನುವು ಮಾಡಿಕೊಡಬೇಕೆಂದು ಅವರು ಒತ್ತಾಯಿಸಿದರು.
ಗಣಪತಿ ಹಬ್ಬವನ್ನು ಬಹುಕಾಲದಿಂದ, ತಲೆತಲಾಂತರದಿಂದ ವಿಜೃಂಭಣೆಯಿಂದ ನಡೆಸಿಕೊಂಡು ಬರಲಾಗುತ್ತಿದೆ. ಗುಲ್ಬರ್ಗದಲ್ಲಿ ರಿಪಬ್ಲಿಕ್ ಆಫ್ ಗುಲ್ಬರ್ಗ ಎಂದು ಕರೆಯುತ್ತಾರೆ. ರಾಜ್ಯದ ಕಾನೂನು, ದೇಶದ ಕಾನೂನು ಅಲ್ಲಿ ನಡೆಯುವುದಿಲ್ಲ. ರಾಜ್ಯಕ್ಕೆ ಒಂದೇ ಕಾನೂನು, ನೀತಿ ಇರಬೇಕು ಎಂದು ಶಾಸಕರು ಪ್ರಸ್ತಾಪಿಸಿದ್ದರು. ಗುಲ್ಬರ್ಗದಲ್ಲಿ ಸದ್ದೇ ಮಾಡದೇ ಗಣಪತಿ ಉತ್ಸವ ಮಾಡಬೇಕೇ? ಕಾಂಗ್ರೆಸ್ಸಿನವರಿಗೆ ಮಾತ್ರ ಮೌನ ಗಣಪತಿ ಬೇಕು ಎಂದು ಟೀಕಿಸಿದರು.
ದಕ್ಷಿಣ ಕನ್ನಡದಲ್ಲೂ ಹಿಂದೂಗಳನ್ನು ತುಳಿಯುವ ಕೆಲಸ
ಬೇರೆಯವರಿಗೆ ಮಣೆ ಹಾಕಿ ಎತ್ತಿ ಕಟ್ಟಬೇಕು; ನೀವು ಓಲೈಕೆ ಮಾಡಬೇಕು. ಹಿಂದೂಗಳನ್ನು ತುಳಿಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ದಕ್ಷಣ ಕನ್ನಡದಲ್ಲೂ ಡಿಜೆ ಹಾಕಬಾರದು ಎಂದು ನಿಷೇಧಿಸಿದ್ದಾರೆ ಎಂದು ಆಕ್ಷೇಪಿಸಿದರು.
ದಕ್ಷಿಣ ಕನ್ನಡದಲ್ಲಿ 1300 ಸೌಂಡ್ ಸಿಸ್ಟಮ್ ನಡೆಸುವವರಿದ್ದಾರೆ. 6 ಸಾವಿರ ಜನ ಕೆಲಸ ಮಾಡುತ್ತಾರೆ. ಆದರೆ, ಪೊಲೀಸರು ಅವರನ್ನು ಕರೆದು ತಾಕೀತು ಮಾಡುವುದು, 8 ಗಂಟೆಗೇ ಮೈಕ್ ಸೆಟ್ ಕಿತ್ತೊಯ್ಯುವ ಕೆಲಸ, ಕೇಸ್ ಹಾಕಿ ಬಂಧಿಸುವ, ಜೈಲಿಗೆ ಕಳಿಸುವ ಕೆಲಸ ಮಾಡುತ್ತಾರೆ ಎಂದು ಟೀಕಿಸಿದರು. ಇದರಿಂದ ಅವರ ಕುಟುಂಬಗಳು ಬೀದಿಪಾಲಾಗುತ್ತವೆ. ಜೊತೆಗೆ ಇದು ಕಾನೂನು ಮೀರಿದ ಕ್ರಮ ಎಂದು ದೂರಿದರು.