ಬೆಂಗಳೂರು, ಆ. 23 (DaijiworldNews/AA): ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಕರ್ನಾಟಕದ ಕರಾವಳಿ, ಮಲೆನಾಡು ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಆಗಸ್ಟ್ 30ರವರೆಗೆ ವ್ಯಾಪಕ ಭಾರೀ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿದೆ. ನಿರಂತರ ಮಳೆಯಿಂದಾಗಿ ಬೆಳಗಾವಿ ಮತ್ತು ಚಿಕ್ಕೋಡಿ ಜಿಲ್ಲೆಗಳಲ್ಲಿ ಪ್ರವಾಹದ ಆತಂಕ ಈಗಾಗಲೇ ಸೃಷ್ಟಿಯಾಗಿದೆ.

ರಾಜ್ಯದ ಹಲವು ಭಾಗಗಳಲ್ಲಿ ಈಗಾಗಲೇ ನಿರಂತರ ಮಳೆಯಾಗುತ್ತಿದೆಯಾದರೂ, ಮುಂದಿನ ಆರು ದಿನಗಳ ಕಾಲ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಆಗಸ್ಟ್ 25ರವರೆಗೆ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಒಳನಾಡಿನ ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಆಗಸ್ಟ್ 26ರಿಂದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಮಳೆ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ.
ಆಗಸ್ಟ್ 26ರಂದು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಅದೇ ರೀತಿ, ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಧಾರವಾಡ, ಗದಗ, ದಾವಣಗೆರೆ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಮನೆಗಳು ಮತ್ತು ಕೃಷಿ ಭೂಮಿಗೆ ಹಾನಿಯಾಗಿದೆ ಎಂದು ಐಎಂಡಿ ಹೇಳಿದೆ.
ಈ ಮಧ್ಯೆ ಮಹಾರಾಷ್ಟ್ರದಲ್ಲಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆ ಬೆಳಗಾವಿ ಹಾಗೂ ಚಿಕ್ಕೋಡಿಯಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಇಲ್ಲಿ ತುಂಬಿ ಹರಿಯುತ್ತಿರುವ ಜಲಾಶಯಗಳಿಂದ ಸೇತುವೆಗಳು ಮುಳುಗಿ, ಜನಜೀವನ ಅಸ್ತವ್ಯಸ್ತಗೊಂಡಿದೆ. ನದಿ ದಡದ ಸಮೀಪ ವಾಸಿಸುವ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಪ್ರವಾಹದ ಭೀತಿಯಿಂದಾಗಿ ಹಲವು ಕುಟುಂಬಗಳು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿವೆ.