ಬೆಂಗಳೂರು, ಆ. 24 (DaijiworldNews/AA): ಅನಾಮಿಕ ವ್ಯಕ್ತಿಯ ಹಿಂದೆ ಯಾರಿದ್ದಾರೆ ಹೊರಬರುತ್ತೆ. ಬಿಜೆಪಿ ಅವರು ಅಧಿಕಾರದಲ್ಲಿದ್ದಾಗ ಮಾಡಲಿಲ್ಲ, ಈಗ ಅವರು ಅಧಿಕಾರದಲ್ಲಿ ಇಲ್ಲ ಎಂದು ಮಾತನಾಡುತ್ತಾರೆ. ಏನೇ ಷಡ್ಯಂತ್ರ ಇದ್ದರೂ ಕೂಡ ಸತ್ಯಾಂಶ ಹೊರಬರಲಿದೆ. ನಮ್ಮ ಕಡೆ ಷಡ್ಯಂತ್ರ ಇದ್ರೆ ಯಾಕೆ ತನಿಖೆ ಮಾಡ್ತಿದ್ವಿ? ಎಂದು ಸಚಿವ ರಾಮಲಿಂಗಾ ರೆಡ್ಡಿ ಪ್ರಶ್ನೆ ಮಾಡಿದ್ದಾರೆ.

ಧರ್ಮಸ್ಥಳ ಪ್ರಕರಣದಲ್ಲಿ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ಬಂಧಿಸಿರುವ ಕುರಿತು ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಕ್ಷೇತ್ರದ ಬಗ್ಗೆ, ಧರ್ಮಾಧಿಕಾರಿಗಳ ಬಗ್ಗೆ ಬಹಳ ವರ್ಷಗಳಿಂದ ಸಾಕಷ್ಟು ಚರ್ಚೆಯಾಗುತ್ತಿತ್ತು. ಯೂಟ್ಯೂಬರ್ಸ್ ಕೂಡ ಮಾತನಾಡುತ್ತಿದ್ದರು, ಎಲ್ಲರೂ ಧರ್ಮಕ್ಕೆ ಸೇರಿದ್ದವರೇ ಆಗಿದ್ದಾರೆ. ಬಿಜೆಪಿ ಧರ್ಮ ರಕ್ಷಣೆ ಕರೆ ಕೊಟ್ಟಿದ್ದಾರೆ. ನಾಲ್ಕು ವರ್ಷ ನಿಮ್ಮದೇ ಸರ್ಕಾರ ಇತ್ತು. ಅರಗ ಜ್ಞಾನೇಂದ್ರ ಗೃಹ ಮಂತ್ರಿಗಳಾಗಿದ್ದರು, ಯಡಿಯೂರಪ್ಪ ಅವರು ಸಿಎಂ ಆಗಿದ್ದರು, ಆಗ ಇದನ್ನೆಲ್ಲಾ ನಿಲ್ಲಿಸಬಹುದಿತ್ತು ಅಲ್ವಾ? ನಮ್ಮ ಸರ್ಕಾರ ಇದರ ಬಗ್ಗೆ ನಿರ್ಧಾರ ಮಾಡಿದೆ. ಎಸ್ಐಟಿ ರಚನೆ ಮಾಡಿದ್ವಿ, ಈಗ ಕ್ಲಾರಿಟಿ ಬಂತು. ಇದು ಬಿಜೆಪಿ ಅವರಿಗೆ ಸಹಿಸಲಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇವರದ್ದೇ ಸರ್ಕಾರ ಇದ್ದಾಗ ಯಾಕೆ ಮಾತನಾಡಿಲ್ಲ? ಯಡಿಯೂರಪ್ಪ, ಅಶೋಕ್ ಯಾಕೆ ಮಾತನಾಡಿಲ್ಲ? ಈಗ ಒಂದು ತಾರ್ಕಿಕ ಅಂತ್ಯಕ್ಕೆ ಬರುತ್ತಿದೆ. 15 ಸ್ಥಳದಲ್ಲಿ ಶೋಧ ಮಾಡದೇ ಇದ್ದರೆ ನಮಗೆ ಏನು ಗೊತ್ತಾಗುತ್ತಿರಲಿಲ್ಲ ತಾನೇ? ಏನೋ ಒಂದು ಕಡೆ ಮೂಳೆ ಸಿಕ್ಕಿದೆ ಅಷ್ಟೇ. ಎಸ್ಐಟಿ ತನಿಖೆ ಮಾಡದಿದ್ರೆ ಕಳಂಕ ಇರೋದು. ಬಿಜೆಪಿ ಅವರಿಗೆ ಅಸೂಯೆ ಜಾಸ್ತಿ ಇದೆ ಎಂದು ವಾಗ್ದಾಳಿ ನಡೆಸಿದರು.