ಹೋಶಿಯಾರಪುರ, ಆ. 24 (DaijiworldNews/TA): ಪಂಜಾಬ್ನ ಹೋಶಿಯಾರಪುರ ಜಿಲ್ಲೆಯಲ್ಲಿ ಸಂಭವಿಸಿದ ಎಲ್ಪಿಜಿ ಟ್ಯಾಂಕರ್ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಏಳಕ್ಕೆ ಏರಿದೆ. ದುರಂತದಲ್ಲಿ ಶೇ.90 ಕ್ಕೂ ಹೆಚ್ಚು ಶರೀರ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ನಾಲ್ವರು ಗಾಯಾಳುಗಳು ಭಾನುವಾರ ಸಾವನ್ನಪ್ಪಿದ್ದಾರೆ ಎಂದು ಹೋಶಿಯಾರಪುರ ಜಿಲ್ಲಾಧಿಕಾರಿ ಆಶಿಕಾ ಜೈನ್ ತಿಳಿಸಿದ್ದಾರೆ.

ಮಂಡಿಯಾಲ ಗ್ರಾಮದ ನಿವಾಸಿಗಳಾದ ಮಂಜಿತ್ ಸಿಂಗ್ (60), ವಿಜಯ್ (17), ಜಸ್ವಿಂದರ್ ಕೌರ್ (65) ಮತ್ತು ಆರಾಧನಾ ವರ್ಮಾ (30) ಎಂಬವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾರೆ. ಇನ್ನು ನಾಲ್ವರು ವೆಂಟಿಲೇಟರ್ ಬೆಂಬಲದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಿವಿಲ್ ಸರ್ಜನ್ ಡಾ. ಪವನ್ ಕುಮಾರ್ ಮಾಹಿತಿ ನೀಡಿದ್ದಾರೆ.
ಈ ಭೀಕರ ದುರ್ಘಟನೆ ಶುಕ್ರವಾರ ರಾತ್ರಿ ಸುಮಾರು 10 ಗಂಟೆ ಸುಮಾರಿಗೆ ಹೋಶಿಯಾರಪುರ-ಜಲಂಧರ್ ರಸ್ತೆಯ ಮಂಡಿಯಾಲ ಅಡ್ಡಾದ ಬಳಿ ಸಂಭವಿಸಿತು. ಎಲ್ಪಿಜಿ ಟ್ಯಾಂಕರ್ ವಾಹನವು ತರಕಾರಿ ತುಂಬಿದ್ದ ಪಿಕಪ್ ವಾಹನಕ್ಕೆ ಡಿಕ್ಕಿಯಾದ ಬಳಿಕ, ಎರಡೂ ವಾಹನಗಳು ಬೆಂಕಿಗೆ ಆಹುತಿಯಾದವು. ತಕ್ಷಣವೇ ಬೆಂಕಿ ಸುತ್ತಲಿನ ಅಂಗಡಿಗಳು ಮತ್ತು ಮನೆಗಳಿಗೆ ಹರಡಿದ ಪರಿಣಾಮ ಸುಮಾರು 15 ಅಂಗಡಿಗಳು ಮತ್ತು ಕನಿಷ್ಠ ನಾಲ್ಕು ಮನೆಗಳು ಸುಟ್ಟು ಭಸ್ಮವಾದವು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ತಕ್ಷಣ ಇಬ್ಬರು ಸಾವನ್ನಪ್ಪಿದ್ದರು ಮತ್ತು ಇತರ 21 ಜನರು ಗಾಯಗೊಂಡಿದ್ದರು. ಶನಿವಾರ ಮತ್ತೊಬ್ಬ ಗಾಯಾಳು ಸಾವನ್ನಪ್ಪಿದ್ದರೆ, ಭಾನುವಾರ ನಾಲ್ವರು ಮೃತಪಟ್ಟಿದ್ದಾರೆ. ಸ್ಥಳೀಯರು ಈ ಅವಘಡದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಶನಿವಾರ ಬೆಳಿಗ್ಗೆ ಮೂರು ಗಂಟೆಗಳ ಕಾಲ ಹೋಶಿಯಾರಪುರ-ಜಲಂಧರ್ ರಸ್ತೆಯಲ್ಲಿ ರಸ್ತೆ ತಡೆ ನಡೆಸಿ ಪರಿಹಾರ ಮತ್ತು ನ್ಯಾಯದ ಬೇಡಿಕೆ ಮುಂದಿಟ್ಟರು.
ಪಂಜಾಬ್ ಸರ್ಕಾರ ಈ ವಿಷಯದಲ್ಲಿ ತ್ವರಿತ ಕ್ರಮ ಕೈಗೊಂಡಿದ್ದು, “ಫರಿಷ್ಟಾ” ಯೋಜನೆಯಡಿ ಗಾಯಾಳುಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜೈನ್ ಭರವಸೆ ನೀಡಿದ್ದಾರೆ. ಇದಕ್ಕೂ ಜೊತೆಗೆ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಹಾಗೂ ಗಾಯಾಳುಗಳಿಗೆ ಉಚಿತ ಚಿಕಿತ್ಸೆ ಘೋಷಿಸಿದ್ದಾರೆ.
ಘಟನೆಯ ಬಳಿಕ ಅನೇಕ ಸಚಿವರು, ಶಾಸಕರು ಹಾಗೂ ವಿವಿಧ ರಾಜಕೀಯ ಪಕ್ಷಗಳ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಧೈರ್ಯ ತುಂಬಿದ್ದಾರೆ. ಪಂಜಾಬ್ ರಾಜ್ಯಪಾಲರು ಹಾಗೂ ಚಂಡೀಗಢದ ಲೆಫ್ಟಿನೆಂಟ್ ಗವರ್ನರ್ ಗುಲಾಬ್ ಚಂದ್ ಕಟಾರಿಯಾ ಅವರು ಈ ದುರಂತ ಕುರಿತು ತಮ್ಮ ಸಂತಾಪ ಸೂಚಿಸಿದ್ದಾರೆ.