ಭುವನೇಶ್ವರ, ಆ. 26 (DaijiworldNews/AA): ಒಡಿಶಾದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, 170ಕ್ಕೂ ಹೆಚ್ಚು ಗ್ರಾಮಗಳು ಜಲಾವೃತಗೊಂಡಿವೆ. ಇನ್ನೂ ಎರಡು ದಿನಗಳ ಕಾಲ ಭಾರಿ ಮಳೆ ಮುದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ.

ಉತ್ತರ ಒಡಿಶಾದ ಬಾಲಸೋರ್, ಭದ್ರಕ್ ಮತ್ತು ಜಾಜ್ಪುರ ಜಿಲ್ಲೆಗಳ 170 ಕ್ಕೂ ಹೆಚ್ಚು ಗ್ರಾಮಗಳು ಜಲಾವೃತಗೊಂಡಿವೆ. ಬಲಿಯಾಪಾಲ್, ಭೋಗ್ರೈ ಮತ್ತು ಜಲೇಶ್ವರ್ ವ್ಯಾಪ್ತಿಯ 130 ಗ್ರಾಮಗಳು ಹಾಗೂ ಜಾಜ್ಪುರದ ಸುಮಾರು 45 ಗ್ರಾಮಗಳು ಪ್ರವಾಹ ಪೀಡಿತವಾಗಿದೆ. ಭದ್ರಕ್ ಜಿಲ್ಲೆಯ ಧಮ್ನಗರ ಮತ್ತು ಭಂಡಾರಿಪೋಖರಿಯಲ್ಲಿ ಮಳೆಯು ತೀವ್ರ ಪರಿಣಾಮ ಉಂಟುಮಾಡಿದೆ. ಕಿಯೋಂಝಾರ್ ಮತ್ತು ಸುಂದರ್ಗಢ ಜಿಲ್ಲೆಗಳ ಕೆಲವು ಗ್ರಾಮಗಳೂ ಜಲಾವೃತವಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಈ ಘಟನೆ ಬಗ್ಗೆ ಮಾತನಾಡಿದ ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಸುರೇಶ್ ಪೂಜಾರಿ ಅವರು, "ಬೈತರಾಣಿ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹೀಗಾಗಿ ಜಾಜ್ಪುರ ಜಿಲ್ಲೆಯಲ್ಲಿ ತೀವ್ರ ಹಾನಿಯುಂಟಾಗಿದೆ. ಜಾಜ್ಪುರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದೇನೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗಿವೆ" ಎಂದು ತಿಳಿಸಿದ್ದಾರೆ.
ಆಗಸ್ಟ್ 26 ಹಾಗೂ 27ರಂದು ಗಜಪತಿ, ರಾಯಗಡ, ನಯಾಗಢ ಮತ್ತು ಕಂಧಮಲ್ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಐಎಂಡಿ ವರದಿ ಮಾಡಿದೆ.