ತಿರುವನಂತಪುರಂ, ಆ. 26 (DaijiworldNews/TA): ಕೇರಳದ ಪ್ರಸಿದ್ಧ ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನದ ಪವಿತ್ರ ತೀರ್ಥ ಕೊಳದಲ್ಲಿ ಕಾಲು ತೊಳೆಯುತ್ತಿರುವ ರೀಲ್ಸ್ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಹಿನ್ನೆಲೆ, ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ಮತ್ತು ಧಾರ್ಮಿಕ ಚರ್ಚೆ ಉಂಟಾಗಿದೆ.

ಈ ವಿಡಿಯೋದಲ್ಲಿ ಮಲಯಾಳಂನ ಮಾಜಿ ಬಿಗ್ ಬಾಸ್ ಸ್ಪರ್ಧಿ ಹಾಗೂ ಸಾಮಾಜಿಕ ಮಾಧ್ಯಮ ಪ್ರಭಾವಿ ಜಾಸ್ಮಿನ್ ಜಾಫರ್ ಅವರು ದೇವಸ್ಥಾನದ ತೀರ್ಥ ಕೊಳದಲ್ಲಿ ಪಾದಗಳನ್ನು ತೊಳೆಯುತ್ತಿರುವ ದೃಶ್ಯವಿದ್ದು, ಇದನ್ನು ಶಿಷ್ಟಾಚಾರದ ಉಲ್ಲಂಘನೆ ಎಂದು ಭಕ್ತರು, ಹಿಂದೂ ಧಾರ್ಮಿಕ ಮುಖಂಡರು ಹಾಗೂ ದೇವಸ್ಥಾನ ಆಡಳಿತ ಮಂಡಳಿ ಖಂಡಿಸಿದ್ದಾರೆ.
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ, ಗುರುವಾಯೂರು ದೇವಸ್ಥಾನದ ಆಡಳಿತ ಮಂಡಳಿ ಮತ್ತು ಭಕ್ತ ಸಮುದಾಯದಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ದೇವಾಲಯದ ಶಿಷ್ಟಾಚಾರ ಹಾಗೂ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಪ್ರಕಾರ, ತೀರ್ಥ ಕೊಳದಲ್ಲಿ ಕಾಲು ತೊಳೆಯುವುದು ನಿಷಿದ್ಧವಾಗಿದೆ. ಇದಲ್ಲದೆ, ದೇವಸ್ಥಾನದ ಆವರಣದಲ್ಲಿ ಪೂರ್ವಾನುಮತಿಯಿಲ್ಲದೆ ಛಾಯಾಗ್ರಹಣ ಹಾಗೂ ವೀಡಿಯೋ ಚಿತ್ರೀಕರಣವನ್ನೂ ಮಾಡಬಾರದು ಎಂಬ ಕಾನೂನು ಜಾರಿಯಲ್ಲಿದೆ.
ಇದೀಗ ಈ ವಿರೋಧದ ಬೆನ್ನಲ್ಲೇ, ಜಾಸ್ಮಿನ್ ಜಾಫರ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವನ್ನು ಅಳಿಸಿದ್ದು, ಸಾರ್ವಜನಿಕ ಕ್ಷಮೆಯಾಚನೆ ಮಾಡಿದ್ದಾರೆ. "ನನ್ನಿಂದ ಯಾರಿಗಾದರೂ ನೋವಾಗಿದೆ ಎಂಬುದನ್ನು ನಾನು ಮನಗಂಡಿದ್ದೇನೆ. ಇದು ನನ್ನ ಅಜ್ಞಾನದಿಂದಾಗಿ ನಡೆದ ತಪ್ಪು. ಯಾರ ಧಾರ್ಮಿಕ ಭಾವನೆಗೂ ಧಕ್ಕೆಯಾಗುವ ಉದ್ದೇಶ ನನ್ನದಲ್ಲ. ನಾನು ಹೃದಯಪೂರ್ವಕವಾಗಿ ಕ್ಷಮೆ ಕೇಳುತ್ತೇನೆ," ಎಂದು ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಸ್ಟೋರಿ ಮೂಲಕ ತಿಳಿಸಿದ್ದಾರೆ.
ಜಾಸ್ಮಿನ್ ಜಾಫರ್ ಮಲಯಾಳಂ ಬಿಗ್ ಬಾಸ್ ಸೀಸನ್ 6 ರಲ್ಲಿ ಸ್ಪರ್ಧಿಸಿ ಖ್ಯಾತಿ ಗಳಿಸಿದ್ದರು. ಈ ಹಿಂದೆ ಅವರು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಸೌಂದರ್ಯ, ಜೀವನಶೈಲಿ ಹಾಗೂ ವಿವಿಧ ವಿಷಯಗಳ ಬಗ್ಗೆ ಟಿಪ್ಸ್ ಹಂಚಿಕೊಳ್ಳುತ್ತಿದ್ದವರು. 1.5 ಮಿಲಿಯನ್ಗೂ ಹೆಚ್ಚು ಯೂಟ್ಯೂಬ್ ಫಾಲೋವರ್ಸ್ ಹೊಂದಿರುವ ಅವರು ಇನ್ಸ್ಟಾಗ್ರಾಂ ಸಹಿತ ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಜನಪ್ರಿಯತೆಯನ್ನು ಗಳಿಸಿದ್ದರು. ಆದರೆ ಈ ಘಟನೆಯಿಂದಾಗಿ ಇದೀಗ ಧಾರ್ಮಿಕ ಪ್ರಕಾರ ಅಪವಿತ್ರ ಕೃತ್ಯ ಎನ್ನುತ್ತಾ ಹೊಸ ವಿವಾದದಲ್ಲಿ ಸಿಲುಕಿದ್ದಾರೆ.
ಗುರುವಾಯೂರು ದೇವಸ್ಥಾನದ ಆಡಳಿತಾಧಿಕಾರಿ ಓಬಿ ಅರುಣ್ ಕುಮಾರ್ ದೇವಾಲಯದ ಪೊಲೀಸರಿಗೆ ಅಧಿಕೃತ ದೂರು ಸಲ್ಲಿಸಿದ್ದು, ಈ ಘಟನೆ ದೇವಾಲಯದ ಶಿಷ್ಟಾಚಾರ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ತಿಳಿಸಿದ್ದಾರೆ. ದೇವಸ್ಥಾನ ಆಡಳಿತ ಮಂಡಳಿ ಯಾವುದೇ ಛಾಯಾಗ್ರಹಣಕ್ಕೂ ಅನುಮತಿ ನೀಡಿಲ್ಲ, ಹಾಗೂ ನ್ಯಾಯಾಲಯದ ಆದೇಶದಂತೆ ಕಟ್ಟುನಿಟ್ಟಾದ ನಿಯಮಗಳು ಜಾರಿಯಲ್ಲಿವೆ ಎಂದು ತಿಳಿಸಿದ್ದಾರೆ.
ಇದೀಗ ದೇವಸ್ಥಾನದಲ್ಲಿ ತೀರ್ಥ ಕೊಳವನ್ನು ಶುದ್ಧೀಕರಿಸುವ ಕ್ರಮಗಳು ಕೈಗೊಳ್ಳಲಾಗಿದ್ದು, ಘಟನೆಯ ಹಿನ್ನೆಲೆಯಲ್ಲಿ ಭಕ್ತರಲ್ಲಿ ಬೇಸರ ಮೂಡಿರುವುದು ಸ್ಪಷ್ಟವಾಗಿದೆ. ಈ ವಿವಾದವು, ದೇವಾಲಯಗಳ ಪವಿತ್ರತೆ ಮತ್ತು ಸಾಮಾಜಿಕ ಮಾಧ್ಯಮದ ಜವಾಬ್ದಾರಿಯ ಕುರಿತು ಮತ್ತೆ ಚರ್ಚೆಗೆ ಗ್ರಾಸವಾಗಿದೆ.