ಲಕ್ನೋ, ಆ. 27 (DaijiworldNews/AA): ಸಾಲ ಬಾಧೆಯಿಂದ ಬಳಲುತ್ತಿದ್ದ ದಂಪತಿಯು ತಮ್ಮ 4 ತಿಂಗಳ ಮಗುವಿಗೆ ವಿಷಪ್ರಾಶನ ಮಾಡಿ ಕೊನೆಗೆ ತಾವೂ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಉತ್ತರ ಪ್ರದೇಶದ ಶಹಜಹಾನ್ಪುರದಲ್ಲಿ ವರದಿಯಾಗಿದೆ.

ಆ.27ರಂದು ಬೆಳಗ್ಗೆ ಮೂವರ ಶವಗಳು ಪ್ರತ್ಯೇಕ ಕೋಣೆಗಳಲ್ಲಿ ಕಂಡುಬಂದಿವೆ. ಕೈಮಗ್ಗ ಉದ್ಯಮಿ ಸಚಿನ್ ಗ್ರೋವರ್ (30) ಮತ್ತು ಅವರ ಪತ್ನಿ ಶಿವಾನಿ (28) ಸಾಲದ ಸುಳಿಯಲ್ಲಿ ಸಿಲುಕಿದ್ದರು. ಈ ದಂಪತಿಗೆ ನಾಲ್ಕು ತಿಂಗಳ ಗಂಡು ಮಗು ಕೂಡ ಇತ್ತು.
ಘಟನಾ ಸ್ಥಳದಲ್ಲಿ ಡೆತ್ನೋಟ್ ಪತ್ತೆಯಾಗಿದ್ದು, ಅದರಲ್ಲಿ ಸಚಿನ್ ಸಾಲದ ಹೊರೆ ಮತ್ತು ಆದಾಯದ ಕೊರತೆಯಿಂದ ತೀವ್ರ ನೊಂದಿರುವುದಾಗಿ ಬರೆದಿದ್ದಾರೆ. ದಯವಿಟ್ಟು ನಮ್ಮ ಕಾರು ಮತ್ತು ಮನೆಯನ್ನು ಮಾರಾಟ ಮಾಡಿ ಸಾಲವನ್ನು ತೀರಿಸಿ. ಸಾಲ ಕೊಟ್ಟವರು ನೊಂದುಕೊಳ್ಳಬಾರದು ಎಂದು ಸಚಿನ್ ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ದಂಪತಿ ಮಂಗಳವಾರ ರಾತ್ರಿ ಸೀಲಿಂಗ್ ಫ್ಯಾನ್ಗಳಿಗೆ ನೇಣು ಹಾಕಿಕೊಂಡಿದ್ದರು. ಮಗುವಿನ ಶವ ಮತ್ತೊಂದು ಕೋಣೆಯಲ್ಲಿ ಪತ್ತೆಯಾಗಿದೆ. ದಂಪತಿ ಆತ್ಮಹತ್ಯೆಗೂ ಮುನ್ನ ತಮ್ಮ ಮಗನಿಗೆ ವಿಷಪ್ರಾಶನ ಮಾಡಿದ್ದಾರೆ.
ಕುಟುಂಬವು ಅವರ ಮನೆಯ ಎರಡನೇ ಮಹಡಿಯಲ್ಲಿ ವಾಸಿಸುತ್ತಿತ್ತು. ನೆಲಮಹಡಿಯಲ್ಲಿ ವಾಸಿಸುವ ಅವರ ಸಂಬಂಧಿಕರಿಗೆ ಅವರು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಪತ್ತೆ ಮಾಡಿದ್ದಾರೆ. "ಮಂಗಳವಾರ ಸಂಜೆ ತನ್ನ ಮಗ ಬ್ಯಾಂಕಿನಲ್ಲಿ 5 ಲಕ್ಷ ರೂಪಾಯಿ ಠೇವಣಿ ಇಡಬೇಕೆಂದು ಹೇಳಿದ್ದ. ಆದರೆ 3 ಲಕ್ಷ ರೂಪಾಯಿ ಹೊಂದಿಸಿದ್ದ. ಅದಕ್ಕಾಗಿ ಅವನು ಸಂಕಷ್ಟದಲ್ಲಿದ್ದ" ಎಂದು ಸಚಿನ್ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.