ಪಾಟ್ನಾ, 27 (DaijiworldNews/AK): ಬಿಹಾರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ , ವೋಟ್ ಚೋರಿ ಮೊದಲು ಗುಜರಾತ್ ರಾಜ್ಯದಲ್ಲಿ ಪ್ರಾರಂಭವಾಯಿತು, 2014ರ ನಂತರ ಭಾರತೀಯ ಜನತಾ ಪಕ್ಷ (ಬಿಜೆಪಿ) ಅದನ್ನು ರಾಷ್ಟ್ರಮಟ್ಟಕ್ಕೆ ತಂದಿತು ಎಂದು ಆರೋಪಿಸಿದ್ದಾರೆ.

ಗುಜರಾತ್ ಮಾದರಿಯ ‘ಮತ ಕಳ್ಳತನ’ದ ಮಾಡೆಲ್ ಅನುಸರಿಸಿ ಬಿಜೆಪಿ ಜನರ ಮತಗಳನ್ನು ಕದಿಯುವ ಮೂಲಕವೇ ಚುನಾವಣೆಗಳನ್ನು ಗೆಲ್ಲುತ್ತಿದೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಬಿಹಾರದ ಮುಜಾಫರ್ಪುರದಲ್ಲಿ ನಡೆದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯವರು ಮಧ್ಯಪ್ರದೇಶ, ಹರಿಯಾಣ ಮತ್ತು ಮಹಾರಾಷ್ಟ್ರದ ಚುನಾವಣೆಗಳಲ್ಲಿ ಮತ ಕಳ್ಳತನ ಮಾಡಿ ಗೆದ್ದಿದ್ದಾರೆ. ನಮ್ಮಲ್ಲಿ ಯಾವುದೇ ಪುರಾವೆ ಇಲ್ಲದ ಕಾರಣ ನಾವು ಏನನ್ನೂ ಹೇಳಲಿಲ್ಲ. ಆದರೆ ಮಹಾರಾಷ್ಟ್ರದಲ್ಲಿ ಅವರು ಅದನ್ನು ಅತಿಯಾಗಿ ಮಾಡಿದ್ದರಿಂದ ನಮಗೆ ಪುರಾವೆ ಸಿಕ್ಕಿತು. ಲೋಕಸಭಾ ಚುನಾವಣೆಯ ನಂತರ ಚುನಾವಣಾ ಆಯೋಗವು ಮಹಾರಾಷ್ಟ್ರದಲ್ಲಿ ಸುಮಾರು 1 ಕೋಟಿ ಹೆಚ್ಚಿನ ಮತಗಳನ್ನು ಸೇರಿಸಿತು. ಅವರೆಲ್ಲರೂ ಬಿಜೆಪಿಗೆ ಮತ ಹಾಕಿದರು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.