ನವದೆಹಲಿ, ಸೆ. 05 (DaijiworldNews/AA): ದೇಶದ ಹಿತಾಸಕ್ತಿಗೆ ಧಕ್ಕೆ ತರುವಂತಹ, ಹಾಗೂ ಮೀನುಗಾರರು, ರೈತರು, ಸಣ್ಣ ಉದ್ದಿಮೆಗಳು, ಧಾರ್ಮಿಕತೆಗೆ ಘಾಸಿ ಮಾಡುವಂತಹ ಯಾವುದೇ ವಿಚಾರದಲ್ಲೂ ಭಾರತ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ತಿಳಿಸಿದ್ದಾರೆ.

ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿದ ಅವರು, "ಯಾವುದೇ ಒಪ್ಪಂದ ಅಂತಿಮಗೊಳಿಸುವ ಮುನ್ನ, ಅದು ರಾಷ್ಟ್ರದ ಹಿತಾಸಕ್ತಿ, ರೈತರು, ಮೀನುಗಾರರು, ಎಂಎಸ್ಎಂಇ ಉದ್ಯಮ, ಅಥವಾ ಧಾರ್ಮಿಕ ಭಾವನೆ, ಹೀಗೆ ಯಾವುದಕ್ಕಾದರೂ ಧಕ್ಕೆ ತರುವುದಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲಾಗುವುದು" ಎಂದು ಹೇಳಿದರು.
"ಅಮೆರಿಕದಲ್ಲಿ ಹಸುಗಳಿಗೆ ಮಾಂಸ ಬೆರೆತ ಆಹಾರವನ್ನು ತಿನಿಸುವ ಅಭ್ಯಾಸ ಇದೆ. ಭಾರತದಲ್ಲಿ ಹಸುಗಳಿಗೆ ಯಾರೂ ಕೂಡ ರಕ್ತ, ಮಾಂಸಪೂರಿತ ಆಹಾರ ಕೊಡೋದಿಲ್ಲ. ಅದು ಧಾರ್ಮಿಕ ಭಾವನೆಗೆ ಧಕ್ಕೆ ತರುವಂಥದ್ದು. ಹೀಗಾಗಿ, ಅಮೆರಿಕದಿಂದ ಡೈರಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದಕ್ಕೆ ಅನೇಕ ಭಾರತೀಯರು ಆಕ್ಷೇಪಿಸುತ್ತಿದ್ದಾರೆ" ಎಂದರು.
ಮುಂದುವರೆದು, "ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ಜಿಎಸ್ಟಿಯನ್ನು ಒಂದು ಯಶಸ್ವಿ ವ್ಯವಸ್ಥೆಯಾಗಿ ರೂಪುಗೊಳ್ಳಲು ಕಳೆದ 8 ವರ್ಷದಲ್ಲಿ ಹೇಗೆ ಹಂತ ಹಂತವಾಗಿ ಕ್ರಮ ತೆಗೆದುಕೊಂಡು ಬಂದಿದ್ದಾರೆ ಎಂಬುದನ್ನು ಇಡೀ ಜಗತ್ತೇ ನೋಡಿದೆ. ಆದರೆ, ಇದು ವಿಪಕ್ಷಗಳ ಅರಿವಿಗೆ ಬಾರದೇ ಹೋಗಿದೆ" ಎಂದು ಹೇಳಿದರು.