ಬೆಂಗಳೂರು, ಸೆ. 05 (DaijiworldNews/AK): ಇವಿಎಂ ಯಂತ್ರಗಳನ್ನು ಬದಿಗಿಟ್ಟು ಮತಪತ್ರದೊಂದಿಗೆ ಚುನಾವಣೆ ನಡೆಸಲು ಈ ಸರಕಾರ ಮುಂದಾಗಿದ್ದು, ಮತ್ತೆ ಪುರಾತನ ಯುಗಕ್ಕೆ ಹೋಗುತ್ತಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರು ಆಕ್ಷೇಪಿಸಿದ್ದಾರೆ.

ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪ್ರಶ್ನೆಗೆ ಉತ್ತರಿಸಿದರು. ಮತಪತ್ರ ಬಳಸಿದರೆ 2-3 ದಿನ ಮತ ಎಣಿಕೆ ಮಾಡಬೇಕಾಗುತ್ತದೆ. ರಾಹುಲ್ ಗಾಂಧಿಯವರು ಹೇಳಿದರೆಂಬ ಕಾರಣಕ್ಕಾಗಿ ಇವಿಎಂ ಬದಿಗಿಟ್ಟು, ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ಮಾಡುವುದನ್ನು ಬಿಜೆಪಿ ಒಪ್ಪುವುದಿಲ್ಲ ಎಂದು ತಿಳಿಸಿದರು.
ಈ ವಿಷಯವನ್ನು ನಾವು ಜನರ ಬಳಿ ಒಯ್ಯುತ್ತೇವೆ ಎಂದು ಹೇಳಿದರು. ತೆಲಂಗಾಣ, ಹಿಮಾಚಲ ಪ್ರದೇಶದಲ್ಲಿ ಇದೇ ಇವಿಎಂ ಮೂಲಕ ನಿಮ್ಮ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿಲ್ಲವೇ? ಎಂದು ಪ್ರಶ್ನಿಸಿದರು. ಕಳ್ಳನ ಮನಸ್ಸು ಹುಳ್ಳುಳ್ಳಗೆ ಎಂಬಂತೆ ಈ ಸರಕಾರ ಏನೇನೋ ತಪ್ಪುಗಳನ್ನು ಮಾಡಲು ಹೊರಟಿದೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಇವಿಎಂ ಯಂತ್ರಗಳನ್ನು ಬದಿಗಿಟ್ಟು ಮತಪತ್ರದೊಂದಿಗೆ ಚುನಾವಣೆ ನಡೆಸಲು ಈ ಸರಕಾರ ಮುಂದಾಗಿದೆ. ನಿಮ್ಮ ಕಾಂಗ್ರೆಸ್ ಸರಕಾರವೇ ಇವಿಎಂ ಮೂಲಕ ಅಧಿಕಾರಕ್ಕೆ ಬಂದಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ಕಾಂಗ್ರೆಸ್ ಪಕ್ಷವು 136 ಶಾಸಕರ ಸ್ಥಾನ ಗೆದ್ದಿದೆ. ಎಂಎಲ್ಸಿ, ಎಂಪಿ ಚುನಾವಣೆಗಳಲ್ಲಿ ಗೆದ್ದಿದ್ದೀರಿ. ಇವಿಎಂ ಮೂಲಕ ಏನೂ ಅಕ್ರಮ ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟಿನ ಅನೇಕ ತೀರ್ಪುಗಳು ಬಂದಿವೆ. ಹೈಕೋರ್ಟಿನ ತೀರ್ಪುಗಳೂ ಬಂದಿವೆ ಎಂದು ಗಮನ ಸೆಳೆದರು.
ದೇಸಾಯಿಯವರ ಆಯೋಗದ ವರದಿಯು ಸಿದ್ದರಾಮಯ್ಯನವರನ್ನು ಮುಡಾ ಕೇಸಿನಿಂದ ಹೊರಕ್ಕೆ ತರಲು ಮತ್ತು ಅವರಿಗೆ ಕ್ಲೀನ್ ಚಿಟ್ ಕೊಡಲು ಅತ್ಯಂತ ವ್ಯವಸ್ಥಿತವಾಗಿ ದೊಡ್ಡ ಷಡ್ಯಂತ್ರ ಮಾಡಿದೆ. ಸಿದ್ದರಾಮಯ್ಯನವರು ಮುಡಾ ಕೇಸಿನಲ್ಲಿ ತಪ್ಪು ಮಾಡಿದ್ದು ನೂರಕ್ಕೆ ನೂರರಷ್ಟು ಸತ್ಯ ಎಂದು ಅವರು ಪ್ರಶ್ನೆಗೆ ಉತ್ತರವಾಗಿ ಆರೋಪಿಸಿದರು. 60 ಕೋಟಿ ಕೊಟ್ಟರೆ ನಿವೇಶನಗಳನ್ನು ವಾಪಸ್ ಕೊಡುವುದಾಗಿ ಅವರೇ ಹೇಳಿದ್ದರು ಎಂದು ಗಮನ ಸೆಳೆದರು.
ಮುಡಾ ವಿಚಾರದಲ್ಲಿ ಸಿದ್ದರಾಮಯ್ಯನವರು ನೂರಕ್ಕೆ ನೂರರಷ್ಟು ತಪ್ಪು ಮಾಡಿದ್ದು, ಕ್ಲೀನ್ ಚಿಟ್ ವಿಷಯದಲ್ಲಿ ಸಾಕಷ್ಟು ನೀರು ಹರಿಸಿದ್ದಾರೆ. ಯಾವ ರೀತಿ ನೀರು ಹರಿಸಿದ್ದಾರೆಂದು ನನಗೆ ತಿಳಿದಿಲ್ಲ ಎಂದು ನುಡಿದರು. ಸಿದ್ದರಾಮಯ್ಯರದು ಅತ್ಯಂತ ಭ್ರಷ್ಟಾಚಾರದ ಸರಕಾರ ಎಂದು ಅವರು ಆರೋಪಿಸಿದರು.
ಕೈಗಾರಿಕೆಗೆ ಜಾಗ ತೆಗೆದುಕೊಳ್ಳಬೇಕೆಂಬ ನೆಪದಲ್ಲಿ ರೈತರ ವಿರೋಧ ಲೆಕ್ಕಿಸದೇ ಜಮೀನನ್ನು ಸ್ವಾಧೀನ ಪಡಿಸುವುದಕ್ಕೆ ಬಿಜೆಪಿ ವಿರೋಧವಿದೆ ಎಂದು ತಿಳಿಸಿದರು.