ಬೆಂಗಳೂರು,ಸೆ. 05 (DaijiworldNews/AK): ಇವಿಎಂ ಬದಲಾಗಿ ಮತಪತ್ರ (ಬ್ಯಾಲೆಟ್ ಪೇಪರ್) ಬಳಕೆ ಒಂದು ರೀತಿ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.

ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ನಿನ್ನೆ ರಾಜ್ಯ ಸಚಿವಸಂಪುಟವು ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ರಾಜ್ಯದಲ್ಲಿ ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತಿತರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಬಳಸುವುದಾಗಿ ನಿರ್ಧರಿಸಿದ್ದಾರೆ. ಚುನಾವಣಾ ಆಯೋಗ ಮತ್ತು ಇವಿಎಂ ಬಗ್ಗೆ ರಾಹುಲ್ ಗಾಂಧಿಯವರಿಗೆ ವಿಶ್ವಾಸ ಹೊರಟು ಹೋಗಿದೆಯಂತೆ. ಹಾಗಾಗಿ, ರಾಜ್ಯದಲ್ಲಿ ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಬಳಸುವುದಾಗಿ ಸಚಿವ ಸಂಪುಟ ನಿರ್ಧಾರ ಮಾಡಿದೆ ಎಂದರು.
ವಾಸ್ತವಿಕ ಸತ್ಯದಿಂದ ನೀವು ದೂರ ಹೋಗದಿರಿ ಎಂದು ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಪಕ್ಷಕ್ಕೆ ಕಿವಿಮಾತು ಹೇಳಿದರು. ದೇಶದ ಜನರಿಗೆ ಇವಿಎಂ ಬಗ್ಗೆ ವಿಶ್ವಾಸ ಹೋಗಿಲ್ಲ; ದೇಶದ ಮತದಾರರಿಗೆ ಕಾಂಗ್ರೆಸ್ ಪಕ್ಷದ ಬಗ್ಗೆ ವಿಶ್ವಾಸ ಹೋಗಿದೆ. ಕಾಂಗ್ರೆಸ್ ಪಕ್ಷದ ನಾಯಕತ್ವದ ಕುರಿತು ವಿಶ್ವಾಸ ಹೋಗಿದೆ ಎಂದು ನುಡಿದರು.
ಈ ವಾಸ್ತವ ಸತ್ಯವನ್ನು ಅರ್ಥ ಮಾಡಿಕೊಳ್ಳದ ಕಾಂಗ್ರೆಸ್ ಮುಖಂಡರು ಚುನಾವಣಾ ಆಯೋಗದ ಮೇಲೆ ಗೂಬೆ ಕೂರಿಸುತ್ತಿದೆ. ಕಾಂಗ್ರೆಸ್ ಪಕ್ಷದವರಿಗೆ ಸುಪ್ರೀಂ ಕೋರ್ಟ್ ಬಗ್ಗೆ, ಚುನಾವಣಾ ಆಯೋಗದ ಕುರಿತು ಕೂಡ ವಿಶ್ವಾಸ ಇಲ್ಲ ಎಂದು ಟೀಕಿಸಿದರು. ಕಾಂಗ್ರೆಸ್ಸಿಗರು ಪ್ರಜಾಪ್ರಭುತ್ವದ ಬಗ್ಗೆ ವಿಶ್ವಾಸ ಕಳಕೊಂಡಿದ್ದಾರೆ ಎಂದು ಆರೋಪಿಸಿದರು.
ಚುನಾವಣೆಯಲ್ಲಿ ಅಕ್ರಮ ನಡೆದಿದ್ದೇ ಆಗಿದ್ದರೆ, ನಿಮ್ಮ 136 ಶಾಸಕರ ರಾಜೀನಾಮೆ ತೆಗೆದುಕೊಳ್ಳಿ. ಗೆದ್ದಿರುವ 9 ಸಂಸದರ ರಾಜೀನಾಮೆ ಪಡೆಯಿರಿ. ತಾಕತ್ತಿದ್ದರೆ ಮತ್ತೆ ಚುನಾವಣೆ ಎದುರಿಸಲಿ ಎಂದು ಸವಾಲು ಹಾಕಿದರು.