ಬೆಂಗಳೂರು,ಅ. 06 (DaijiworldNews/AK):ಮಧ್ಯಪ್ರದೇಶದಲ್ಲಿ ಕೆಮ್ಮಿನ ಸಿರಪ್ ಕುಡಿದು ಮಕ್ಕಳು ಸಾವನ್ನಪ್ಪಿದ ಬಳಿಕ ಎಚ್ಚೆತ್ತುಕೊಂಡ ರಾಜ್ಯ ಆರೋಗ್ಯ ಇಲಾಖೆ ಮಹತ್ವದ ಸಭೆ ನಡೆಸಿ ಕೆಮ್ಮಿನ ಸಿರಪ್ ಬಳಕೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಆರೋಗ್ಯ ಇಲಾಖೆ ಮಾರ್ಗಸೂಚಿಯ ಪ್ರಕಾರ, 2 ವರ್ಷದೊಳಗಿನ ಮಕ್ಕಳಿಗೆ ಸಿರಪ್ ನೀಡುವಂತಿಲ್ಲ. 2-5 ವರ್ಷದ ಮಕ್ಕಳಿಗೆ ತಜ್ಞರ ಸಲಹೆ ಮೇರೆಗೆ ಔಷಧಿ ನೀಡಬೇಕು. ಅಲ್ಲದೇ 5 ವರ್ಷ ಮೇಲ್ಪಟ್ಟ ಮಕ್ಕಳಿಗೆ ವೈದ್ಯರ ಸಲಹೆ ಮೇರೆಗೆ ಔಷಧಿ ನೀಡಬೇಕು. ಕಡಿಮೆ ಅವಧಿಗೆ ಕನಿಷ್ಠ ಅಗತ್ಯವಿರುವ ಡೋಸ್ ಬಳಸಬೇಕು. ಮಲ್ಟಿಮೆಡಿಸನ್ ಒಳಗೊಂಡ ಸಿರಪ್ಗಳನ್ನ ಬಳಸಬಾರದು ಎಂದು ತಿಳಿಸಿದೆ.
ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಕೆಮ್ಮಿನ ಸಿರಪ್ಗಳನ್ನ ಖರೀದಿಸಬಾರದು, ಬಳಸಬಾರದು. ಈ ಹಿಂದೆ ಬಳಸಿದ ಔಷಧಿಗಳನ್ನ ಮರುಬಳಕೆ ಮಾಡಬಾರದು. ಕೆಮ್ಮು ಉಲ್ಬಣಗೊಂಡರೆ ವೈದ್ಯರನ್ನ ಸಂಪರ್ಕಿಸಿ. ಅವಧಿ ಮೀರಿದ ಔಷಧಿಗಳನ್ನ ನೋಡಿ ಬಳಸಬೇಕು. ಯಾವುದೇ ಅಸಹಜ ಪ್ರತಿಕ್ರಿಯೆ, ನಿದ್ರಾವಸ್ಥೆ ವಾಂತಿ ಅಥವಾ ಉಸಿರಾಟ ತೊಂದರೆ ಇದ್ದರೆ ಹತ್ತಿರದ ವೈದ್ಯರನ್ನ ಸಂಪರ್ಕಿಸಿ. ಔಷಧ ಅವಧಿ ಮುಗಿಯುವ ದಿನಾಂಕವನ್ನು ಪರಿಶೀಲಿಸಿ ಮತ್ತು ಲೇಬಲ್ಗಳನ್ನು ಎಚ್ಚರಿಕೆಯಿಂದ ಓದಿ ಎಂದು ಸೂಚಿಸಲಾಗಿದೆ.