ನವದೆಹಲಿ, ಅ. 07 (DaijiworldNews/TA): ಸೈಬರ್ ಅಪರಾಧಿಗಳು ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಜನರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುವ ಮಾರ್ಗ ಹುಡುಕುತ್ತಲೇ ಇದ್ದಾರೆ. ಇತ್ತೀಚೆಗೆ ಗುರುಗ್ರಾಮನಲ್ಲಿ ನಡೆದ ಸೈಬರ್ ವಂಚನೆಯ ಒಂದು ಪ್ರಕರಣವು ಇದೀಗ ಭಾರಿ ಆತಂಕ ಮೂಡಿಸಿದೆ. "ಮದುವೆ ಆಮಂತ್ರಣ ಲಿಂಕ್" ವಂಚನೆಗೆ ಬಲಿಯಾದ ವ್ಯಕ್ತಿಯೊಬ್ಬರು ರೂ.97,000 ರೂ. ಕಳೆದುಕೊಂಡಿದ್ದಾರೆ.

ವಿಷ್ಣು ಗಾರ್ಡನ್ ನಿವಾಸಿ ವಿನೋದ್ ಕುಮಾರ್ ಅವರ ಮೊಬೈಲ್ ಫೋನ್ಗೆ ವಾಟ್ಸಾಪ್ನಲ್ಲಿ ಅಪರಿಚಿತ ಸಂಖ್ಯೆಯಿಂದ ಮದುವೆಯ ಆಮಂತ್ರಣ ಲಿಂಕ್ ಬಂದಿದೆ. ಲಿಂಕ್ ಮೇಲೆ ಕ್ಲಿಕ್ ಮಾಡುವ ಸಮಯದಲ್ಲಿ ಅವರಿಗೆ ಯಾವುದೇ ಅನುಮಾನವಾದರೂ, ಅದು ಯಾರಿಂದ ಬಂದಿದೆ ಎಂಬ ಕುತೂಹಲದಿಂದ ಕ್ಲಿಕ್ ಮಾಡಿದ್ದಾರೆ. ಆದರೆ ಅದೇ ಕ್ಷಣದಿಂದಲೇ ಅವರ ಮೊಬೈಲ್ ಹ್ಯಾಕ್ ಆಗಿದ್ದು, ಸೈಬರ್ ಅಪರಾಧಿಗಳು ಮೂರು ಬಾರಿ ಅನಧಿಕೃತವಾಗಿ ಹಣ ವರ್ಗಾಯಿಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ಅವರ ಬ್ಯಾಂಕ್ ಖಾತೆಯಿಂದ ರೂ. 97,000 ರಷ್ಟು ಮೊತ್ತವನ್ನು ಕಿರಾತಕರು ದೋಚಿದ್ದಾರೆ.
ಘಟನೆಯ ಬಗ್ಗೆ ಅರಿತ ಕೂಡಲೇ ವಿನೋದ್ ಕುಮಾರ್ ಅವರು ಗುರುಗ್ರಾಮದ ಸೈಬರ್ ಕ್ರೈಂ ಠಾಣೆಗೆ ದೂರು ಸಲ್ಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇದು ಜನರಿಗೆ ಎಚ್ಚರಿಕೆಯ ಗಂಟೆ ಹಾಕುವಂತಹ ಘಟನೆ ಎನಿಸಿದೆ. “ಅಪರಿಚಿತ ಸಂಖ್ಯೆಯಿಂದ ಬರುವ ಲಿಂಕ್ಗಳ ಮೇಲೆ ಕ್ಲಿಕ್ ಮಾಡಬೇಡಿ, ಬಹುಪಾಲು ಇವು ಸೈಬರ್ ಬೇಟೆಗಾರರಿಂದ ಬರುವ ಫಿಶಿಂಗ್ ಲಿಂಕ್ಗಳಾಗಿವೆ,” ಎಂದು ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ತಂತ್ರಜ್ಞಾನದಲ್ಲಿ ಸಾಕಷ್ಟು ಮುನ್ನಡೆ ಕಂಡರೂ, ಸಾರ್ವಜನಿಕರ ಜಾಗೃತಿ ಮಾತ್ರ ಇದೇ ಮಟ್ಟಿಗೆ ನಿಲ್ಲುತ್ತಿದೆ ಎಂಬುದು ಈ ಘಟನೆಗಳಿಂದ ಸ್ಪಷ್ಟವಾಗುತ್ತಿದೆ. ಇದು ಕೇವಲ ಗುರುಗ್ರಾಮಕ್ಕಷ್ಟೇ ಸೀಮಿತವಿಲ್ಲ. ಇಡೀ ದೇಶದಲ್ಲಿ ಇಂತಹ ವಂಚನೆಗಳು ಹೆಚ್ಚಾಗುತ್ತಿವೆ. ವಿಶೇಷವಾಗಿ ಮದುವೆ, ಪಾರ್ಟಿ ಅಥವಾ ಉಡುಗೊರೆಗಳ ಲಿಂಕ್ನ ರೂಪದಲ್ಲಿ ಬರುವ ಸಂದೇಶಗಳ ಮೂಲಕ ಜನರನ್ನು ಮೋಸಗೊಳಿಸಲಾಗುತ್ತಿದೆ.