ಚೆನ್ನೈ, ಅ. 17 (DaijiworldNews/TA): ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರ ಚೆನ್ನೈನ ನಿವಾಸಕ್ಕೆ ಬಾಂಬ್ ಇಟ್ಟಿರುವಂತೆ ಅಪರಿಚಿತ ವ್ಯಕ್ತಿಯೊಬ್ಬರು ಬಾಂಬ್ ಬೆದರಿಕೆ ಕರೆ ಮಾಡಿ ಆತಂಕ ಸೃಷ್ಟಿಯಾಗಿತ್ತು. ಈ ವಿಚಾರ ತಿಳಿದ ಪೋಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಲಿಲ್ಲ. ಪೊಲೀಸರು ಇದನ್ನು ಹುಸಿ ಬಾಂಬ್ ಬೆದರಿಕೆ ಎಂದು ತಿಳಿಸಿದ್ದರು.

ಇತ್ತೀಚೆಗೆ ತಮಿಳುನಾಡಿನಲ್ಲಿ ಹುಸಿ ಬಾಂಬ್ ಬೆದರಿಕೆ ಪ್ರಕರಣಗಳು ಹೆಚ್ಚಾಗಿವೆ. ಈಗ ಕೆಲ ದಿನಗಳ ಹಿಂದೆ ನಟ ಹಾಗೂ ಟಿವಿ ಚಾನೆಲ್ ಅಧ್ಯಕ್ಷ ವಿಜಯ್ ಅವರ ಮನೆಯಲ್ಲಿ ಹೀಗೊಂದು ಹುಸಿ ಬಾಂಬ್ ಬೆದರಿಕೆಯ ಕರೆ ವರದಿಯಾಗಿತ್ತು. ಅಲ್ಲಿಯೂ ಪೊಲೀಸರು ಪರಿಶೀಲನೆ ನಡೆಸಿ ಬೆದರಿಕೆಯು ಹುಸಿಯಾಗಿದ್ದುದಾಗಿ ಕಂಡುಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ 38 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಇದಕ್ಕೂ ಮುನ್ನ ಮದುರವೋಯಲ್ ಪ್ರದೇಶದಲ್ಲೂ ಅನಾಮಧೇಯ ವ್ಯಕ್ತಿಯೊಬ್ಬನು ಪಲ್ಲವನ್ ನಗರ ಪಾರ್ಕ್ ಹಾಗೂ ಸಮೀಪದ ದೇವಸ್ಥಾನದಲ್ಲಿ ಬಾಂಬ್ ಇಟ್ಟಿರುವ ಬಗ್ಗೆ ಬೆದರಿಕೆ ಕರೆ ಮಾಡಿದ್ದಾನೆ. ಸ್ಥಳಕ್ಕೆ ಬಂದು ಪರಿಶೀಲಿಸಿದ ಪೊಲೀಸರಿಗೆ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಲಿಲ್ಲ. ಈ ಪ್ರಕರಣದ ಬೆನ್ನಿಗೆ ವಿಲ್ಲುಪುರಂ ಜಿಲ್ಲೆ ನಿವಾಸಿ 43 ವರ್ಷದ ಭೂಪತಿಯನ್ನು ಬಂಧಿಸಲಾಗಿದೆ. ಪೊಲೀಸರು ಸಾರ್ವಜನಿಕರನ್ನು ಹುಸಿ ಬೆದರಿಕೆ ಕರೆಗಳಿಗೆ ಎಚ್ಚರಿಕೆಯಿಂದ ಸ್ಪಂದಿಸಲು ಮತ್ತು ಯಾವುದೇ ಅನುಮಾನಾಸ್ಪದ ಘಟನೆಗಳ ಬಗ್ಗೆ ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಲು ಕರೆ ನೀಡಿದ್ದಾರೆ.