ಮೈಸೂರು, ಅ. 17 (DaijiworldNews/AK):ಬಿಹಾರ ರಾಜ್ಯದ ಚುನಾವಣೆಯಲ್ಲಿ ಇಂಡಿಯಾ ಬ್ಲಾಕ್ ಗೆಲ್ಲಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಅವರು ಇಂದು ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಜನ ಬದಲಾವಣೆ ಬಯಸುತ್ತಿದ್ದಾರೆ. ಬದಲಾವಣೆ ಆಗುತ್ತದೆ ಎಂಬ ನಂಬಿಕೆ ಇದೆ ಎಂದು ಅವರು ಹೇಳಿದರು. ರಾಹುಲ್ ಗಾಂಧಿಯವರ ಪಾದಯಾತ್ರೆಯ ಸಂದರ್ಭದಲ್ಲಿ ಜನರಿಂದ ಅಭೂತಪೂರ್ವ ಪ್ರತಿಕ್ರಿಯೆ ಲಭಿಸಿದ್ದು ಗೆಲುವು ನಮ್ಮದಾಗಲಿದೆ ಎಂದರು.
ಪ್ರಚಾರಕ್ಕೆ ಕರೆದರೆ ಹೋಗುತ್ತೇನೆ ಎಂದು ಹೇಳಿದರು. ಬಿಹಾರ ಚುನಾವಣೆಯ ಫಲಿತಾಂಶ ಕರ್ನಾಟಕ ರಾಜ್ಯದ ರಾಜಕಾರಣದ ಮೇಲೆ ಪರಿಣಾಮ ಬೀರಲಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಯಾವ ರಾಜ್ಯದ ಫಲಿತಾಂಶವೂ ಯಾವ ರಾಜ್ಯದ ಮೇಲೂ ಪರಿಣಾಮ ಬೀರುವುದಿಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.
ನವೆಂಬರ್ ಕ್ರಾಂತಿ: ನಿರ್ಲಕ್ಷಿಸಿ
ಕ್ರಾಂತಿ ಎಂದರೇನು? ಬದಲಾವಣೆ ಕ್ರಾಂತಿ ಅಲ್ಲ ಎಂದು ನವೆಂಬರ್ ಕ್ರಾಂತಿ ಬಗ್ಗೆ ಪ್ರಶ್ನಿಸಿದ ಮಾಧ್ಯಮದವರಿಗೆ ಮುಖ್ಯಮಂತ್ರಿಗಳು ಪ್ರತಿಕ್ರಿಯೆ ನೀಡಿದರು. ಯಾರು ಈ ಬಗ್ಗೆ ಹೇಳಿದರೂ ಮಾಧ್ಯಮದವರು ನಿರ್ಲಕ್ಷಿಸಬೇಕು ಎಂದರು.
ಆರ್.ಎಸ್.ಎಸ್ ಸೇರಿದಂತೆ ಇತರೆ ಸಂಘ ಸಂಸ್ಥೆಗಳ ಚಟುವಟಿಕೆಗಳಿಗೆ ನಿರ್ಬಂಧ
ಶಾಲಾ ಆವರಣದಲ್ಲಿ ಸಂಘ ಸಂಸ್ಥೆಗಳ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ಬಗ್ಗೆ 2013 ರಲ್ಲಿ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಗಳಿದ್ದ ಸಂದರ್ಭದಲ್ಲಿ ಸರ್ಕಾರಿ ಆದೇಶ ಹೊರಡಿಸಿರುವ ಬಗ್ಗೆ ಮಾತನಾಡಿ ಕೇವಲ ಆರ್.ಎಸ್.ಎಸ್ ಚಟುವಟಿಕೆಗಳಿಗೆ ಮಾತ್ರವಲ್ಲ ಎಲ್ಲಾ ಸಂಘ ಸಂಸ್ಥೆಗಳ ಚಟುವಟಿಕೆಗಳ ಮೇಲೂ ಸರ್ಕಾರಿ ಆದೇಶ ಅನ್ವಯವಾಗುತ್ತದೆ. ಸರ್ಕಾರಿ ಶಾಲೆ, ಆಟದ ಮೈದಾನ, ಸರ್ಕಾರಿ ಸ್ಥಳಗಳು, ಉದ್ಯಾನವನಗಳಲ್ಲಿ , ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ ಎಂದರು.
ನಾರಾಯಣಮೂರ್ತಿ ಅವರು ಇದು ಹಿಂದುಳಿದವರ ಸಮೀಕ್ಷೆ ಎಂದು ಭಾವಿಸಿದ್ದರೆ ಅದು ತಪ್ಪು
ಇನ್ಫೋಸಿಸ್ ಸಂಸ್ಥೆಯ ಮುಖ್ಯಸ್ಥರಾದ ಸುಧಾ ಮೂರ್ತಿ ಹಾಗೂ ನಾರಾಯಣಮೂರ್ತಿ ವವರು ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗೆ ಮಾಹಿತಿ ನೀಡುವುದಿಲ್ಲ, ನಾವು ಹಿಂದುಳಿದ ಜಾತಿಯವರಲ್ಲ ಎಂದು ದೃಢೀಕರಣ ಪತ್ರ ನೀಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಸಮೀಕ್ಷೆ ಹಿಂದುಳಿದವರಿಗಲ್ಲಾ ಎಂದು ಅರ್ಥ ಮಾಡಿಕೊಳ್ಳಬೇಕು. ಇನ್ಫೋಸಿಸ್ ಸಂಸ್ಥೆಯವರು ಅಂದರೆ ಅವರು ಬೃಹಸ್ಪತಿಗಳೇ ? ಸರ್ಕಾರ ಮಾಡುತ್ತಿರುವುದು ಹಿಂದುಳಿದವರ ಸಮೀಕ್ಷೆಯಲ್ಲ ಎಂದು ಈಗಾಗಲೇ ಹೇಳಿದೆ. ಇದು ಎಲ್ಲಾ ಜನಸಂಖ್ಯೆಯನ್ನು ಒಳಗೊಂಡಂತೆ ಮಾಡುತ್ತಿರುವ ಸಮೀಕ್ಷೆ. ಶಕ್ತಿ ಯೋಜನೆಯಡಿ ಬಡವರು , ಮೇಲ್ಜಾತಿಯವರು ಎಲ್ಲರೂ ಬಳಸಿಕೊಳ್ಳುತ್ತಾರೆ. ಈ ಬಗ್ಗೆ ತಪ್ಪು ಮಾಹಿತಿ ಹೋಗಿದೆ. ಸರ್ಕಾರ ಈ ಬಗ್ಗೆ ಜಾಹೀರಾತು, ಸಚಿವರು ಹಾಗೂ ಮುಖ್ಯಮಂತ್ರಿಗಳ ಸಂದೇಶಗಳನ್ನು ಜನರಿಗೆ ತಲುಪಿಸಿದೆ ಎಂದರು.