ಗಾಂಧಿನಗರ, ಅ. 17 (DaijiworldNews/AA): ಗುಜರಾತ್ನಲ್ಲಿಂದು ನಡೆದ ಸಂಪುಟ ವಿಸ್ತರಣೆ ಕಾರ್ಯಕ್ರಮದಲ್ಲಿ ಹರ್ಷ ಸಾಂಘ್ವಿ ರಾಜ್ಯದ ನೂತನ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಜೊತೆಗೆ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಸೇರಿ 26 ಸಚಿವರೂ ಪ್ರಮಾಣ ಸ್ವೀಕರಿಸಿದರು.

ಭೂಪೇಂದ್ರ ಪಟೇಲ್ ಸಂಪುಟದ 16 ಸಚಿವರು ಸಾಮೂಹಿಕ ರಾಜೀನಾಮೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಗಾಂಧಿನಗರದ ಮಹಾತ್ಮ ಮಂದಿರ ಸಮಾವೇಶ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ 26 ಸದಸ್ಯರು ಸಚಿವರಾಗಿ ಪ್ರಮಾಣ ಸ್ವೀಕಾರ ಮಾಡಿದರು. ಜಾತಿ ಮತ್ತು ಪ್ರಾದೇಶಿಕ ಸಮತೋಲನದ ಆಧಾರದ ಮೇಲೆ ಕೆಲವರಿಗೆ, ವಿಪಕ್ಷಗಳಿಂದ ಬಿಜೆಪಿ ಸೇರ್ಪಡೆಯಾದ ಕೆಲ ನಾಯಕರನ್ನ ಗುರುತಿಸಿ ಸಚಿವ ಸ್ಥಾನ ನೀಡಿರುವುದು ಹಿರಿಯ ನಾಯಕರ ಮೆಚ್ಚುಗೆಗೂ ಪಾತ್ರವಾಗಿದೆ.
ಪಾಟಿದಾರ್ ಸಮುದಾಯದ ಆರು ಮಂದಿ, ಪರಿಶಿಷ್ಟ ಜಾತಿಯಿಂದ ಮೂವರು, ಆದಿವಾಸಿ ಸಮುದಾಯದ ನಾಲ್ವರು, ಕ್ಷತ್ರಿಯ ಸಮುದಾಯದ ಇಬ್ಬರು, ಒಬಿಸಿ ಸಮುದಾಯದ ಎಂಟು ಮಂದಿ ಹಾಗೂ ಬ್ರಾಹ್ಮಣ ಮತ್ತು ಜೈನ ಸಮುದಾಯ ತಲಾ ಒಬ್ಬೊಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ.